ಸೋಮವಾರಪೇಟೆ, ಮೇ.೧೨ : ನೆರೆಯ ಸಕಲೇಶಪುರ ತಾಲೂಕಿನ ಮಾಗೇರಿ ಸಮೀಪದ ಕಲ್ಲಹಳ್ಳಿಯಲ್ಲಿ ರಕ್ತದ ಕಲೆಗಳೊಂದಿಗೆ ಪತ್ತೆಯಾಗಿರುವ ಕಾರಿನ ಪ್ರಕರಣವನ್ನು ಭೇದಿಸಲು ಮೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಮುಂದಾಗಿದ್ದು, ನಾಪತ್ತೆಯಾಗಿರುವ ಸಂಪತ್‌ಗಾಗಿ ಶೋಧಕಾರ್ಯ ತೀವ್ರಗೊಂಡಿದೆ.

ಜಿಲ್ಲೆಯ ಕುಶಾಲನಗರದ ಉದ್ಯಮಿಯೋರ್ವರ ಕಾರನ್ನು ತೆಗೆದುಕೊಂಡು ಹೋಗಿದ್ದ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಸಮೀಪದ ನಿವಾಸಿ ಸಂಪತ್ (ಶಂಭು) ಈವರೆಗೆ ಪತ್ತೆಯಾಗದೇ ಇರುವುದು ಪ್ರಕರಣದ ಅನುಮಾನವನ್ನು ಹೆಚ್ಚಿಸಿದೆ. ರಕ್ತದ ಕಲೆಗಳೊಂದಿಗೆ ಕಲ್ಲಹಳ್ಳಿಯಲ್ಲಿ ಪತ್ತೆಯಾಗಿದ್ದ ಕಾರನ್ನು ಯಸಳೂರು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದ್ದು, ಕಾರಿನ ಒಳಗಿದ್ದ ರಕ್ತದ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಮಾಹಿತಿಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕಾರಿನೊಳಗೆ ದೊರೆತ ರಕ್ತವು ಮನುಷ್ಯರದ್ದೇ ಎಂಬುದನ್ನು ಮೊದಲು ದೃಢಪಡಿಸಿಕೊಳ್ಳಬೇಕಿದೆ. ಈಗಾಗಲೇ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನಿನ್ನೆ ಹಾಗೂ ಮೊನ್ನೆ ಸರ್ಕಾರಿ ರಜೆಯಿದ್ದ ಹಿನ್ನೆಲೆ ವರದಿ ಇನ್ನೂ ಬಂದಿಲ್ಲ ಎಂದು ಯಸಳೂರು ಪೊಲೀಸ್ ಠಾಣೆಯಿಂದ ಮಾಹಿತಿ ಲಭಿಸಿದೆ.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನಿರಂಜನ್‌ಕುಮಾರ್ ಅವರು ಘಟನೆಯ ಮಾಹಿತಿ ಪಡೆದಿದ್ದು, ಯಸಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರಿಗೆ ತನಿಖೆಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಇತ್ತ ಕುಶಾಲನಗರದಲ್ಲಿ ಸಂಪತ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ನಾಪತ್ತೆಯಾಗಿರುವ ಸಂಪತ್‌ನ ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ಈವರೆಗೆ ಪತ್ತೆಯಾಗಿಲ್ಲ. ಈತನ ಮೊಬೈಲ್‌ಗೆ ಬಂದಿರುವ ಕೊನೆಯ ಕರೆಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಇದರೊಂದಿಗೆ ಈ ಹಿಂದೆ ನಡೆದಿರುವ ಗಲಾಟೆ ಪ್ರಕರಣಗಳಲ್ಲಿ ಸಂಪತ್‌ನ ಎದುರಾಳಿಗಳಾಗಿದ್ದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಒಂದಿಬ್ಬರು ಊರು ಬಿಟ್ಟಿರುವ ಬಗ್ಗೆಯೂ ಪೊಲೀಸರು ಖಾತ್ರಿಪಡಿಸಿಕೊಂಡಿದ್ದಾರೆ. ಕೆಲವರು ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆಗೆ ಸಹಕರಿಸಿದ್ದರೆ, ಇನ್ನು ಕೆಲವರು ಮೊಬೈಲ್‌ಗಳನ್ನು ಬಿಟ್ಟು ಮನೆಗೂ ಬಾರದೇ ನಾಪತ್ತೆಯಾಗಿರುವುದು ಸಂಶಯವನ್ನು ಇನ್ನಷ್ಟು ಹೆಚ್ಚುಗೊಳಿಸಿದೆ. ಆರಂಭದಲ್ಲಿ ಪೊಲೀಸರ ಕರೆಗಳನ್ನು ಸ್ವೀಕರಿಸಿದ ಈರ್ವರು, ನಂತರ ಪೊಲೀಸ್ ಠಾಣೆಗೆ ಆಗಮಿಸದೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸರ ತನಿಖೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದ್ದು, ಕುಶಾಲನಗರದಲ್ಲಿದ್ದ ಸಂಪತ್‌ಗೆ ಸೇರಿದ ಕಾರಿನಿಂದ ಕೆಲವೊಂದು ಸಾಕ್ಷö್ಯ ಒದಗಿಸುವ ವಸ್ತುಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಸೋಮವಾರಪೇಟೆ ಪೊಲೀಸರು ಘಟನೆಗೆ ಸಂಬAಧಿಸಿದAತೆ ಮಹಿಳೆಯೋರ್ವರಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಇದರ ನಡುವೆ ಒಂದಿಬ್ಬರು ಊರು ಬಿಟ್ಟಿರುವುದರಿಂದ ಸಂಶಯವೂ ಬಲವಾಗುತ್ತಿದೆ. ಯಸಳೂರು ಸುತ್ತಮುತ್ತಲ ೫ ಕಿ.ಮೀ. ವ್ಯಾಪ್ತಿಯಲ್ಲಿ ಘಟನೆಯ ಸಾಕ್ಷö್ಯ ಹುಡುಕಲು ಇಲಾಖೆ ಮುಂದಾಗುತ್ತಿದೆ ಎನ್ನಲಾಗಿದ್ದು, ತನಿಖೆ ಪ್ರಗತಿಯಲ್ಲಿರುವ ಹಿನ್ನೆಲೆ ಸೋಮವಾರಪೇಟೆ ಪೊಲೀಸರು ಯಾವುದೇ ಮಾಹಿತಿಯನ್ನು ಹೊರಹಾಕಲು ಮುಂದಾಗುತ್ತಿಲ್ಲ.