ಸೋಮವಾರಪೇಟೆ, ಮೇ ೧೨: ಜನಸಾಮಾನ್ಯರಿಗೆ ಆರ್ಥಿಕ ಸೇವೆ ಒದಗಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ತರವಾಗಿದೆ. ಸಮಾಜದಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವ ಜವಾಬ್ದಾರಿಯೂ ಸಹಕಾರ ಸಂಘದ ಮೇಲಿದೆ ಎಂದು ಇಲ್ಲಿನ ವಿರಕ್ತ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ಸೋಮವಾರಪೇಟೆಯ ಬಸವೇಶ್ವರ ದೇವಾಲಯ ರಸ್ತೆಯ ದೂಪಶ್ರೀ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ತೆರೆಯಲಾಗಿರುವ ವೀರಶೈವ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ, ನಂತರ ಬೇಳೂರು ರಸ್ತೆಯಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವಿಶೇಷ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜನರಲ್ಲಿ ಉಳಿತಾಯ ಮನೋಭಾವನೆ ಬೆಳೆಸಬೇಕು. ಸಂಘವು ಇಡೀ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಆರ್ಥಿಕತೆಯೊಂದಿಗೆ ಸಮಾಜದ ಅಭಿವೃದ್ಧಿ ಕಾರ್ಯವೂ ಆಗಲಿ ಎಂದು ಸ್ವಾಮೀಜಿ ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರ ಸಂಘದ ಪ್ರವರ್ತಕರಾದ ಕೆ.ಎನ್. ತೇಜಸ್ವಿ ಮಾತನಾಡಿ, ಸಹಕಾರ ಕ್ಷೇತ್ರ ದೇಶದಲ್ಲಿ ವಿಸ್ತಾರವಾಗಿದೆ. ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಜಿಲ್ಲೆಯಲ್ಲಿಯೂ ತಮ್ಮ ಕಾರ್ಯತತ್ಪರತೆಯಿಂದ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ ಎಂದರು.
ಕೇAದ್ರ ಸರ್ಕಾರ ಸಹಕಾರ ಕಾಯ್ದೆಗೆ ಸಮಗ್ರ ತಿದ್ದುಪಡಿ ತಂದು ಸಹಕಾರ ಕ್ಷೇತ್ರವನ್ನು ಬಲಿಷ್ಠಗೊಳಿಸಿದೆ. ಆಡಳಿತ ಮಂಡಳಿಗೆ ಹೆಚ್ಚು ಸ್ವಾತಂತ್ರ‍್ಯ ನೀಡಿದ ಪರಿಣಾಮ ಸಹಕಾರ ಕ್ಷೇತ್ರ ಸಮಾಜಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿದೆ. ವೀರಶೈವ ಸೌಹಾರ್ದ ಸಹಕಾರ ಸಂಘವು ತಾಲೂಕಿನಾದ್ಯಂತ ಸದಸ್ಯರನ್ನು ಹೊಂದುವ ಗುರಿ ಇಟ್ಟುಕೊಂಡಿದೆ. ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಇರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಸಂಘ ಕಾರ್ಯನಿರ್ವಹಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಹೆಚ್.ಎಸ್. ಯುವರಾಜ್ ಮಾತನಾಡಿ, ಸಮಾಜದ ಅಭಿವೃದ್ಧಿ, ಬಡಮಂದಿಗೆ ಆರ್ಥಿಕ ಸೇವೆ ಒದಗಿಸುವ ಉದ್ದೇಶದಿಂದ ನೂತನವಾಗಿ ಸಂಘ ರಚಿಸಲಾಗಿದೆ. ಈಗಾಗಲೇ ಸಂಘದಲ್ಲಿ ಸೋಮವಾರ ಪೇಟೆ ತಾಲೂಕು ವ್ಯಾಪ್ತಿಯ ವೀರಶೈವ ಸಮಾಜದ ೨೬೭ ಮಂದಿ ಸದಸ್ಯರಿದ್ದಾರೆ. ಪ್ರಸ್ತುತ ೧೨ ಲಕ್ಷ ಷೇರು ಬಂಡವಾಳವಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಸಂಘದಲ್ಲಿ ನೂತನ ಯೋಜನೆಗಳನ್ನು ಅಳವಡಿಸಲಾಗುವುದು. ಸದಸ್ಯರ ಹಿತದೊಂದಿಗೆ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಲು ಕಾರ್ಯಯೋಜನೆ ರೂಪಿಸಲಾಗುವುದು. ಸಹಕಾರ ಸಂಘಕ್ಕೆ ಸದಸ್ಯರುಗಳೇ ಬೆನ್ನೆಲುಬಾಗಿದ್ದು, ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬಿ.ಆರ್. ಮೃತ್ಯುಂಜಯ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಸುರೇಶ್, ಸಂಘದ ಪ್ರವರ್ತಕರುಗಳಾದ ಜಿ.ಎಸ್. ಪ್ರಭುದೇವ್, ನವೀನ್ ಬಸವಕುಮಾರ್, ಜಿ.ಜೆ. ಗಿರೀಶ್, ಬಿ.ಪಿ. ಶಿವಕುಮಾರ್, ನಾಗೇಶ್, ಸಿ.ಸಿ. ನಾಗರಾಜ್, ಭಗವತಿ ದೇಶ್‌ಮುಖ್, ಮಾಯಾ ಗಿರೀಶ್, ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಸೋಮಶೇಖರ್ ಸೇರಿದಂತೆ ಇತರರು ಇದ್ದರು.