ಕೂಡಿಗೆ, ಮೇ ೧೧: ಹೆಬ್ಬಾಲೆಯಲ್ಲಿರುವ ಹೆಬ್ಬಾಲೆ ಪ್ರೌಢಶಾಲೆಗೆ ೧೯೮೮-೯೧ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಸಹಪಾಠಿ ವಿದ್ಯಾರ್ಥಿಗಳ ಸಂಘಟನೆಯ ಮೂಲಕ ನೂತನವಾಗಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ರೂ. ೧೦ ಲಕ್ಷ ವೆಚ್ಚದಲ್ಲಿ ಶೌಚಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಅದರ ಉದ್ಘಾಟನೆಯನ್ನು ಸಿದ್ದಲಿಂಗಪುರ ಗ್ರಾಮದ ಸಮಾಜ ಸೇವಕ, ಉದ್ಯಮಿ ಹಾಗೂ ಹಳೆ ವಿದ್ಯಾರ್ಥಿ ನಾಪಂಡ ಮುತ್ತಪ್ಪ ನೆರವೇರಿಸಿದರು.
ನಂತರ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಜನೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಬದುಕಿನ ಯಶಸ್ಸಿಗೆ ಕಾರಣಕರ್ತರಾದ ವಿದ್ಯಾಸಂಸ್ಥೆ ಮತ್ತು ವಿದ್ಯೆಯನ್ನು ಕಲಿಸಿದ ಗುರುಗಳನ್ನು ನೆನೆದರೆ ತಮ್ಮ ಬದುಕು ಆಸನಗೊಳ್ಳುವುದರ ಜೊತೆಯಲ್ಲಿ ತನ್ನ ಕೈಗೊಂಡ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಾಗಲು ಅನುಕೂಲವಾಗುವುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾಕುಮಾರಿ ವಹಿಸಿ ಹಳೆ ವಿದ್ಯಾರ್ಥಿಗಳು ಕೈಗೊಂಡ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ನಾಪಂಡ ಮುದ್ದಪ್ಪ, ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಮೋಹನ್, ಬನಶಂಕರಿ ದೇವಾಲಯ ಸಮಿತಿ ಖಜಾಂಚಿ ಸೋಮಣ್ಣ, ಪ್ರೌಢಶಾಲಾ ವಿಧ್ಯಾವರ್ಧಕ ಸಂಘದ ಕಾರ್ಯದರ್ಶಿ ಚಂದ್ರು, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಸವರಾಜ್ ಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಹಪಾಠಿಗಳ ಪ್ರಮುಖರಾದ ಮಾಜಿ ಸೈನಿಕ ಪುಟ್ಟೆಗೌಡ, ಗುತ್ತಿಗೆದಾರ ಕೆ.ಆರ್. ದಿನೇಶ್, ಶಿಕ್ಷಕ ಕುಮಾರ್, ಪೊಲೀಸ್ ಠಾಣಾಧಿಕಾರಿ ಗೀತಾ, ವನಜಾಕ್ಷಿ, ಕುಮಾರ್ ಸೀಗಪುರ್, ಉದಯ, ಸೇರಿದಂತೆ ನೂರಾರು ಸಹಪಾಠಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ನಡುವೆ ವಿವಿಧ ಕ್ರೀಡಾಕೂಟಗಳು ನಡೆದವು, ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಈ ಸಾಲಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ವನಜಾಕ್ಷಿ ಮತ್ತು ನಿಶಾ ಎಂಬ ವಿದ್ಯಾರ್ಥಿಗಳನ್ನು ಮತ್ತು ಸಹಪಾಠಿಯ ಮಕ್ಕಳು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಶಯಶು, ಚಂದನಾ ಅವರುಗಳನ್ನು ಗುರುತಿಸಿ ಗೌರವಿಸಲಾಯಿತು.
ಕ್ರೀಡಾಕೂಟದಲ್ಲಿ ವಿಜೇತರಿಗೆ ಉದ್ಯಮಿ ನಾಪಂಡ ಮುದ್ದಪ್ಪ ಬಹುಮಾನ ವಿತರಣೆ ಮಾಡಿದರು. ಕುಮಾರ್ ಸ್ವಾಗತಿಸಿ, ಪುಟ್ಟೆಗೌಡ ವಂದಿಸಿದರು.