ವೀರಾಜಪೇಟೆ, ಮೇ ೧೦: ಮೈಸೂರು ಜಿಲ್ಲೆ ಯಾದವಗಿರಿಯ ಕೆಆರ್‌ಎಸ್ ರಸ್ತೆಯಲ್ಲಿರುವ ದಿ ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘ ನಿಯಮಿತದ ೨೦೨೪-೨೫ ರ ಸಾಲಿನ ವಾರ್ಷಿಕ ವಿಶೇಷ ಸರ್ವ ಸದಸ್ಯರ ಸಭೆ ಸಂಘದ ಕಚೇರಿ ಆವರಣದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಕಾಫಿ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ವಹಿಸಿದ್ದರು.

ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಘದ ಕಾರ್ಯ ಚಟುವಟಿಕೆಗಳನ್ನು, ಕಳೆದ ಒಂದು ವರ್ಷದಿಂದ ಎ.ಎಸ್ ಪೊನ್ನಣ್ಣ ಅವರ ವಿಶೇಷ ಆಸಕ್ತಿ ಹಾಗೂ ಪ್ರಯತ್ನದಿಂದ ಮತ್ತೆ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದ್ದು, ಸಂಘದ ಮೊದಲ ವಾರ್ಷಿಕ ಮಹಾಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ವರದಿಯನ್ನು ಮಂಡಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘವು ಈ ಭಾಗದ ಹಾಗೂ ಸುತ್ತಮುತ್ತಲಿನ ಕಾಫಿ ಬೆಳೆಯುವ ಪ್ರದೇಶಗಳ ರೈತರಿಗೆ ಬಹುದೊಡ್ಡ ವರದಾನವಾಗಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತಾಗಲು ಸಂಘದ ಎಲ್ಲಾ ಸದಸ್ಯರು ಅತ್ಯಂತ ನಿಷ್ಠೆಯಿಂದ ತಮ್ಮ ಕಾರ್ಯಗಳನ್ನು ಮಾಡುವುದಲ್ಲದೆ ಸಂಘವು ಮತ್ತಷ್ಟು ಏಳಿಗೆ ಕಾಣುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಉಪಾಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.