ಸಿದ್ದಾಪುರ, ಮೇ ೧೦: ಮೀಸಲು ಅರಣ್ಯ ಪ್ರದೇಶದೊಳಗೆ ಎರಡು ಕಾಡುಕೋಣಗಳನ್ನು ಗುಂಡಿಕ್ಕಿ ಬೇಟೆಯಾಡಿ ಕೊಂದಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮಾ. ೨೬ ರಂದು ರಾತ್ರಿ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಅವರೆಗುಂದ ಮೀಸಲು ಅರಣ್ಯ ಪ್ರದೇಶದೊಳಗೆ ದುಷ್ಕರ್ಮಿಗಳು ಅಕ್ರಮ ಪ್ರವೇಶ ಮಾಡಿ ಎರಡು ಕಾಡುಕೋಣಗಳನ್ನು ಗುಂಡಿಕ್ಕಿ ಕೊಂದು ಹಾಕಿದ್ದರು. ಗುಂಡಿನ ಶಬ್ದದಿಂದಾಗಿ ಸ್ಥಳೀಯ ನಿವಾಸಿಗಳು ಮಧ್ಯರಾತ್ರಿಯಲ್ಲಿ ಎಚ್ಚೆತ್ತುಕೊಂಡು ಬರುವಷ್ಟರಲ್ಲಿ ಸಾವನ್ನಪ್ಪಿದ ಕಾಡುಕೋಣಗಳನ್ನು ಸ್ಥಳದಲ್ಲಿ ಬಿಟ್ಟು ಆರೋಪಿಗಳು ವಾಹನದಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಅವರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಆರೋಪಿಗಳ ಪತ್ತೆಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಹಾಗೂ ಎ.ಸಿ.ಎಫ್. ಗೋಪಾಲ್.ಎ.ಎ. ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು.
ತನಿಖೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳಾದ ಗುಹ್ಯ ಗ್ರಾಮದ ಕೂಡುಗದ್ದೆ ನಿವಾಸಿ ಅಸ್ಕರ್ (೨೬) ಹಾಗೂ ಸಿದ್ದಾಪುರದ ಹೈಸ್ಕೂಲ್ ಪೈಸಾರಿ ನಿವಾಸಿ ವಿನೋದ್ ಕುಮಾರ್ (೩೪) ಎಂಬವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಹಾಗೂ ಕಾಡುಕೋಣಗಳಿಗೆ ಗುಂಡಿಕ್ಕಿದ ಶೂಟರ್ ಗುಹ್ಯ ಗ್ರಾಮದ ಕೂಡುಗದ್ದೆ ನಿವಾಸಿ ಸೂರಿ ಸುಬ್ರಮಣ್ಯ ಸೇರಿದಂತೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಪಾಝಿಲ್ ಎಂಬಾತನ ಹೆಸರಿನಲ್ಲಿರುವ ವಾಹನವನ್ನು ಕೃತ್ಯಕ್ಕೆ ಬಳಸಿದ್ದಾರೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ವಾಹನ ಕೂಡ ಪತ್ತೆಯಾಗಿರುವುದಿಲ್ಲ. ಇದೀಗ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಹಾಗೂ ಕಾಡುಕೋಣಗಳ ಗುಂಡಿಕ್ಕಿದ ಬಂದೂಕು ಯಾರಿಗೆ ಸೇರಿದೆ ಎಂದು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕಾರ್ಯಾಚರಣೆಯಲ್ಲಿ ಎ.ಸಿ.ಎಫ್. ಗೋಪಾಲ್‌ಎ.ಎ. ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳಾದ ಹಂಝಾ, ಆರ್.ಎಸ್. ವೆಂಕಟೇಶ್, ಜಗದೀಶ, ಸಂಪತ್‌ಕುಮಾರ್, ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. -ವರದಿ : ವಾಸು