ಹಿಂದೆ ಎಂದೋ ಅರಣ್ಯಕ್ಕೆ ಕೊಟ್ಟದ್ದೆಂದು ಸರಕಾರ ಘೋಷಿಸಿದ್ದ ಜಾಗವನ್ನು ಸರ್ವೇ ನಡೆಸಲು ಸೋಮವಾರಪೇಟೆಯ ಕಲ್ಕಂದೂರು ಗ್ರಾಮಕ್ಕೆ ಅರಣ್ಯ ಖಾತೆಯ ಸಿಬ್ಬಂದಿಗಳು ಹೋಗಿರುವವರನ್ನು ರೈತರು ತಡೆದಿರುವುದಾಗಿ ಪತ್ರಿಕೆಯಲ್ಲಿ ವರದಿಯಾಗಿದೆ. ರೈತರು ತಡೆದದ್ದು ನ್ಯಾಯಯುತವಾಗಿದೆ. ಕರ್ನಾಟಕ ಕಾಫಿ ರೈತರ ಸಂಘದ ಕೊಡಗು ಘಟಕ ರೈತರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸುತ್ತದೆ.
ಅನೇಕ ವರ್ಷಗಳಿಂದ ರೈತರ ವಶದಲ್ಲಿರುವ ಭೂಮಿಯನ್ನು ಅರಣ್ಯಕ್ಕೆಂದು ವಶಪಡಿಸಿಕೊಳ್ಳುವ ಪ್ರಕ್ರಿಯೆಯ ಹಂತವಾಗಿ ಸರ್ವೇ ನಡೆಸಲು ಮುಂದಾಗಿರುವುದು ಖಂಡನಾರ್ಹ.
ಹಲವು ವರ್ಷಗಳ ಹಿಂದೆ ಅಂದಿನ ಸರಕಾರಗಳು ಏಕಪಕ್ಷೀಯವಾಗಿ, ಜನವಾಸ ಸ್ಥಳಗಳನ್ನೂ ಅರಣ್ಯಕ್ಕೆ ಕೊಟ್ಟಿರುವುದಾಗಿ ವಿವೇಚನೆ ಇಲ್ಲದೆ ಘೋಷಿಸಿದ್ದವು. ಈ ರೀತಿ ಜನವಾಸ ಸ್ಥಳಗಳನ್ನೂ ಅರಣ್ಯಕ್ಕೆಂದು ಘೋಷಿಸಿದ ಸರಕಾರಗಳೇ ಮುಂದೆ ಅದೇ ಪ್ರದೇಶಗಳಲ್ಲಿ ಅಲ್ಲಿನ ನಿವಾಸಿಗಳಿಗೆ ಎಲ್ಲಾ ಸೌಕರ್ಯಗಳನ್ನೂ ಕೊಟ್ಟವು.
ಸರಕಾರ ಆ ಪ್ರದೇಶವನ್ನು ಕೊಡಲು ಗುರುತಿಸುವಾಗ ಅಲ್ಲಿ ವಾಸಿಸುತ್ತಿರುವವರ ಬಗ್ಗೆ ಚಿಂತಿಸಬೇಕಿತ್ತು. ಗುರುತಿಸಿದ ನಂತರ ಅಲ್ಲಿ ವಾಸಿಸುತ್ತಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕಿತ್ತು. ಗುರುತಿಸಿದ ಪ್ರದೇಶದಲ್ಲಿ ಯಾರೂ ಹೊಸದಾಗಿ ಬಂದು ವಾಸಿಸದಂತೆ ಆಗಲೇ ನಿರ್ಬಂಧ ಹೇರಬೇಕಿತ್ತು.
ಸರಕಾರಗಳು ಹಾಗೇನೂ ಮಾಡಲಿಲ್ಲ. ಅಲ್ಲಿ ಬಂದು ವಾಸಿಸುವವರಿಗೆ ಮೂಲಭೂತ ಸೌಕರ್ಯಗಳನ್ನು ಕೊಟ್ಟಿವೆ. ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿವೆ. ಅವರ ಮತ ಪಡೆದೇ ಗೆದ್ದವರು ಗೆದ್ದಿದ್ದಾರೆ
ಈಗ ಸರಕಾರ ಅವರಿಗೆ ನೋಟಿಸು ಕೊಟ್ಟು ಅವರನ್ನು ಎಬ್ಬಿಸಲು, ಅವರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ಜನರಿಗೆ ಎಸಗುತ್ತಿರುವ ಘೋರ ಅನ್ಯಾಯವಾಗಿದೆ ಮತ್ತು ಕಾನೂನುಬಾಹಿರ ಕ್ರಮವಾಗಿದೆ.
ಹಿಂದಿನ ಸರಕಾರಗಳು ಮಾಡಿದ ತಪ್ಪನ್ನು ಇಂದಿನ ಸರಕಾರ ಮುಂದುವರಿಸುವುದಲ್ಲ. ಅವನ್ನು ತಿದ್ದಬೇಕು. ಹಿಂದಿನ ಸರಕಾರಗಳು ವಿವೇಚನೆ ಇಲ್ಲದೆ ಜನವಸತಿ ಪ್ರದೇಶಗಳನ್ನೂ ಅರಣ್ಯಕ್ಕೆಂದು ಕೊಟ್ಟಿರುವ ಆದೇಶವನ್ನು ಇಂದಿನ ಸರಕಾರ ರದ್ದುಮಾಡಬೇಕು. ಬದಲಾಗಿ ಜನರು ವಾಸವಿಲ್ಲದ ಪ್ರದೇಶಗಳನ್ನು ಅರಣ್ಯ ರಚನೆಗೆ ಕೊಡಬೇಕು. ಈ ಕೆಳಗಿನ ಪ್ರದೇಶಗಳನ್ನು ಅರಣ್ಯ ರಚನೆಗಾಗಿ ಕೊಡಬೇಕು.
ಅ) “ಸ್ವಾತಂತ್ರö್ಯಕ್ಕೆ ಪೂರ್ವದಲ್ಲಿ ೭೫೦೦ ಎಕರೆ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ಲೀಸ್‌ಗೆ ಕೊಡಲಾಗಿತ್ತು. ಲೀಸ್ ಅವಧಿ ಮಗಿದಿದೆ ಎಂದು ಅವರಿಗೆ ನಮ್ಮ ಅಧಿಕಾರಿಗಳು ನೋಟಿಸು ಕೊಟ್ಟಾಗ ಕೆಲವರು ನ್ಯಾಯಾಲಯವನ್ನು ಪ್ರವೇಶಿಸಿದರು. ತಮಗೆ ೯೯೯ ವರ್ಷಗಳಿಗೆ ಲೀಸಿಗೆ ಕೊಟ್ಟದ್ದೆಂದು ಅವರು ವಾದ ಮಂಡಿಸಿದರು. ನಾವು ಆ ವಾದವನ್ನು ಅಲ್ಲಗಳೆದೆವು. ಲೀಸ್ ಅವಧಿ ೯೯ ವರ್ಷವೆಂದು ನ್ಯಾಯಾಲಯವೂ ಒಪ್ಪಿಕೊಂಡಿದೆ. ಹೀಗೆ ಲೀಸ್ ಕೊಟ್ಟ ಪ್ರದೇಶ ೭೫೦೦ ಎಕರೆ ಇದ್ದು ಅವನ್ನು ಹಿಂದಕ್ಕೆ ಪಡೆಯಬೇಕಿದೆ. ಇವನ್ನು ಹಿಂದಕ್ಕೆ ಪಡೆದರೆ ನಮ್ಮ ಅರಣ್ಯದ ವ್ಯಾಪ್ತಿ ಹೆಚ್ಚುತ್ತದೆ.” ಎಂದು ರಾಜ್ಯದಲ್ಲಿ ಅರಣ್ಯ, ಪರಿಸರ ಮತ್ತು ಹವಾಮಾನ ಮಂತ್ರಿ ಈಶ್ವರ ಬಿ. ಖಂಡ್ರೆಯವರು ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದರು.
ಹಿಂಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಕ್ಕಾಗಿ ಒಂದು ಸಮಿತಿಯನ್ನು ರಚಿಸಿರುವುದಾಗಿಯೂ ಅವರು ಹೇಳಿದ್ದರು. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು.
ಆ) ಮೊದಲು ಕೊಡಗಿನಲ್ಲಿ ಪೈಸಾರಿ ಜಾಗಗಳ ಸಮಗ್ರ ಸರ್ವೆ ನಡೆಸಬೇಕು. ಒತ್ತುವರಿದಾರರ ಪಟ್ಟಿಯನ್ನು ಜಿಲ್ಲಾಡಳಿತ ತಯಾರಿಸಿಲ್ಲವಾದರೆ ಮೊದಲು ಅದನ್ನು ತಯಾರಿಸಬೇಕು.
೧) ಕೊಡಗಿನಲ್ಲಿ ಅತ್ಯಂತ ದೊಡ್ಡ ಭೂ ಹಿಡುವಳಿದಾರ ಕಂಪೆನಿಗಳು ಕಬಳಿಸಿರಬಹುದಾದ ಪೈಸಾರಿ ಭೂಮಿಯನ್ನು ಕಂಡುಹಿಡಿದು ಅದನ್ನು ಸರಕಾರ ವಶಕ್ಕೆ ತೆಗೆದುಕೊಳ್ಳಬೇಕು.
೨) ಸುಮಾರು ೨೫೦೦ ಎಕರೆಯಷ್ಟು ಖಾಸಗಿ ತೋಟವನ್ನು ಮಾರಿ ಅದನ್ನು ಕಡಿದು ಮನೆಗೆ ಸೈಟ್‌ಗಳನ್ನಾಗಿ ಮಾಡಲು ಹೊರಟಿರುವುದನ್ನು ತಡೆಯಬೇಕು. ಆ ಪ್ರದೇಶವನ್ನು ಅರಣ್ಯವನ್ನಾಗಿ ಪರಿವರ್ತಿಸಬೇಕು.
೩) ಕೊಡಗಿನ ಕೆಲವು ಪ್ರಭಾವಿ ರಾಜಕಾರಣಿಗಳು, ತಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ತಮಗೆ ಸಿಕ್ಕ ಸ್ಥಾನವನ್ನು ಉಪಯೋಗಿಸಿಕೊಂಡು ಸರಕಾರಿ ಭೂಮಿಯನ್ನು ಲಪಟಾಯಿಸಿರುತ್ತಾರೆ. ಇದನ್ನು ಕಂಡುಹಿಡಿಯಬೇಕು.
೪) ರಾಷ್ಟçಮಟ್ಟದ, ರಾಜ್ಯಮಟ್ಟದ ರಾಜಕಾರಣಿಗಳು, ಹೊರಗಿನ ಶ್ರೀಮಂತರು ಕೊಡಗಿನಲ್ಲಿ ಭೂಮಿ ಖರೀದಿಸಿದಾಗ ಪೈಸಾರಿ ಜಾಗವನ್ನು ಲಪಟಾಯಿಸಿರುತ್ತಾರೆ. ಅದನ್ನು ಕಂಡುಹಿಡಿಯಬೇಕು.
೫) ಸರಕಾರ ಈಗ ಬೆಳೆಗಾರರ ವಶದಲ್ಲಿರುವ ಜಾಗವನ್ನು ಅವರಿಗೆ ಗುತ್ತಿಗೆಗೆ ಕೊಡಲು ತೀರ್ಮಾನಿಸಿದೆ.
ಸಣ್ಣ ಬೆಳೆಗಾರರು ವಶಪಡಿಸಿಕೊಂಡಿರುವುದರಲ್ಲಿ ೫ ಎಕರೆಯನ್ನು ಅವರಿಗೇ ಕೊಡಬೇಕು. ಉಳಿದ ಜಾಗವನ್ನು ವಶಪಡಿಸಿಕೊಳ್ಳಬೇಕು. ದೊಡ್ಡ ಬೆಳೆಗಾರರಿಗೆ ಈ ರಿಯಾಯಿತಿ ಕೊಡುವ ಅಗತ್ಯವಿಲ್ಲ. ಈ ಜಾಗಗಳನ್ನು ಅರಣ್ಯ ಖಾತೆಗೆ ಕೊಡಬೇಕು.
‘ರಾಜ್ಯ ಸರಕಾರಗಳು ತಾವಾಗಿ ಪಟ್ಟಿ ಕೊಟ್ಟು ತಾವು ಈ ಜಾಗಗಳನ್ನು ಮೀಸಲು ಅರಣ್ಯವೆಂದು ಘೋಷಿಸುತ್ತೇವೆ” ಎಂದ ನಂತರ ಅವರು ಮುಂದುವರಿಯದಿದ್ದರೆ ನ್ಯಾಯಾಲಯ “ನೀವು ಬರೆದುಕೊಟ್ಟದ್ದು ಏನಾಯಿತು?” ಎಂದು ಕೇಳುತ್ತದೆ.
“ಮೀಸಲು ಅರಣ್ಯಗಳೆಂದು ಸರಕಾರವೇ ತಿಳಿಸಿದ್ದನ್ನು ಪ್ರಸ್ತಾಪಿಸಿ “ನೀವೇ ಹೇಳಿದಂತೆ ಮೀಸಲು ಅರಣ್ಯ ಏಕೆ ರಚಿಸಿಲ್ಲ. ಆ ಪ್ರಕ್ರಿಯೆ ಏಕೆ ಪ್ರಾಥಮಿಕ ಹಂತದಲ್ಲೇ ಇದೆ?” ಎಂದು ನ್ಯಾಯಾಲಯ ಕೇಳಿದೆಯೇ ವಿನ: “ಈ ಜಾಗಗಳನ್ನೇ ಮಾಡಿ” ಎಂದು ನ್ಯಾಯಾಲಯ ಎಲ್ಲಿಯೂ ಆದೇಶಿಸಿಲ್ಲ. ಆದ್ದರಿಂದ ಉಚ್ಛ ನ್ಯಾಯಾಲಯದತ್ತ ಬೊಟ್ಟು ಮಾಡಿ ತೋರಿ ಸರಕಾರ ವರ್ತಿಸುವುದು ಸರಿಯಲ್ಲ.
ಇದರೊಂದಿಗೇ, ನಮ್ಮ ರಾಜ್ಯದ ಉಚ್ಛ ನ್ಯಾಯಾಲಯದ ೧೯೧೯ ಮತ್ತು ೨೦೨೨ರ ತೀರ್ಪಿನ ಆಧಾರದಲ್ಲಿ ಡೀಮ್ಡ್ ಫಾರೆಸ್ಟ್ ವಿಚಾರವನ್ನು ರಾಜ್ಯ ಸರಕಾರ ಕೈ ಬಿಡಬೇಕು
‘ಪರಿಭಾವಿತ ಅರಣ್ಯ’(ಡೀಮ್ಡ್ ಫಾರೆಸ್ಟ್) ವಿಚಾರವನ್ನು ಕೈ ಬಿಟ್ಟಾಗ ಅದರ ಹೆಸರಿನಲ್ಲಿ “ ಅರಣ್ಯ”ವೆಂದು ಕರೆಯಲ್ಪಡುವ ಸಿ ಮತ್ತು ಡಿ ಭೂಮಿ, ಪೈಸಾರಿ ಮೊದಲಾದ ವಿಭಾಗದ ಭೂಮಿಗಳು “ಅರಣ್ಯ” ಪಟ್ಟಿಯಿಂದ ಸ್ವತಂತ್ರವಾಗುತ್ತವೆ.
ಅವುಗಳಲ್ಲಿ ವಾಸಿಸುತ್ತಿರುವ ಜನರ ಒಡೆತನದ ಹಕ್ಕಿನ ಪ್ರಶ್ನೆಯನ್ನು ಸುಲಭದಲ್ಲಿ ಪರಿಹರಿಸಲು ಸಾಧ್ಯ. ಇಲ್ಲಿ ವಾಸಿಸುತ್ತಿರುವವರಲ್ಲಿ, ಕೃಷಿ ಮಾಡಿಕೊಡು ಜೀವಿಸುತ್ತಿರುವವರಲ್ಲಿ ಆರ್ಥಿಕವಾಗಿ ದುರ್ಬಲರ ವಶದಲ್ಲಿರುವ ಭೂಮಿಯ ಒಡೆತನವನ್ನು ಅವರಿಗೆ ಕೊಡಬೇಕು.
ಧನಂಜಯ ಮತ್ತು ಕರ್ನಾಟಕ ರಾಜ್ಯ ಸರಕಾರ ಮತ್ತಿತರರ ನಡುವಿನ ಮೊಕದ್ದಮೆಯಲ್ಲಿ ೨೦೧೯ರ ಜೂನ್ ೧೨ ರಂದು ಕೊಟ್ಟ ತೀರ್ಪಿನಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ನಮ್ಮ ರಾಜ್ಯದ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಸ್ಪಷ್ಟ ತೀರ್ಪು ನೀಡಿದೆ.
ಈ ತೀರ್ಪಿನಲ್ಲಿ ನ್ಯಾಯಾಲಯವು “ಪರಿಭಾವಿತ ಅರಣ್ಯದ ವಿಚಾರವು ಕೇವಲ ಅಧಿಕಾರಿಗಳ ಕಲ್ಪನೆ ಎಂದೂ ಅದಕ್ಕೆ ನಿಯಮದಲ್ಲಿ ಸ್ಥಾನವಿಲ್ಲವೆಂದೂ” ಅಸಂಧಿಗ್ಧವಾಗಿ ಹೇಳಿತು.
“ಅರಣ್ಯ ಸಂರಕ್ಷಣಾ ಕಾಯಿದೆ -೧೯೮೦ರಲ್ಲಿ ‘ಡೀಮ್ಡ್ ಫಾರೆಸ್ಟ್’ ಪರಿಕಲ್ಪನೆಯೇ ಇಲ್ಲ. ಹಾಗಾಗಿ ಸರಕಾರದ ‘ಡೀಮ್ಡ್ ಫಾರೆಸ್ಟ್’ ವ್ಯಾಖ್ಯಾನವನ್ನು ಒಪ್ಪಲಾಗದು” ಎಂದು ನಮ್ಮ ರಾಜ್ಯದ ಉಚ್ಛ ನ್ಯಾಯಾಲಯ ೨೦೨೨ರಲ್ಲಿ ಪುನರುಚ್ಛರಿಸಿತು.“ಈ ಹಿಂದೆ ೨೦೧೯ರ ಜೂನ್ ೧೨ರಂದು ಧನಂಜಯ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ಹೈಕೋರ್ಟ್ನ ವಿಭಾಗೀಯ ಪೀಠ ಸ್ಪಷ್ಟ ತೀರ್ಪು ನೀಡಿದೆ. ಹಾಗಾಗಿ ಮತ್ತೆ ಈ ವಿಚಾರದಲ್ಲಿ ನ್ಯಾಯಾಲಯ ವ್ಯಾಖ್ಯಾನ ನೀಡುವ ಅಗತ್ಯವಿಲ್ಲ. ಹಿಂದಿನ ಆದೇಶದಂತೆ ‘ಅರಣ್ಯ’ ಮತ್ತು ‘ಅರಣ್ಯ ಭೂಮಿ’ ಎಂಬುದು ಕಾಯಿದೆಯಲ್ಲಿ ಉಲ್ಲೇಖವಿದೆ. ಆದರೆ ‘ಡೀಮ್ಡ್ ಅರಣ್ಯ’ ಎಂಬ ಉಲ್ಲೇಖ ಕಾಯಿದೆಯಲ್ಲಿ ಎಲ್ಲೂ ಇಲ್ಲ. ಕಾಯಿದೆ ಮತ್ತು ನಿಯಮಗಳಲ್ಲಿ ಇಲ್ಲದೆ ಅದನ್ನು ಮಾನ್ಯ ಮಾಡಲಾಗದು” ಎಂದು ವಿಭಾಗೀಯ ಪೀಠ ಮತ್ತೆ ಹೇಳಿತು.
ಚಿಕ್ಕಮಗಳೂರು ಜಿಲ್ಲೆಯ ಅರೆನೂರು ಗ್ರಾಮದ ಡಿ.ಎಂ. ದೇವೇಗೌಡರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ.ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ೨೦೨೨ ರ ಜೂನ್ ೨೧ ರಂದು ಈ ಆದೇಶ ನೀಡಿದ್ದಾಗಿದೆ.
“ಅರ್ಜಿದಾರರ ಪರ ವಕೀಲರು ಮತ್ತು ಹೆಚ್ಚುವರಿ ಸರಕಾರೀ ವಕೀಲರು ಇಬ್ಬರೂ ಸಹಾ ಧನಂಜಯ ಪ್ರಕರಣದಲ್ಲಿ ಹೈಕೋರ್ಟ್ ಈಗಾಗಲೇ ನೀಡಿರುವ ತೀರ್ಪಿಗೆ ಈ ಪ್ರಕರಣ ಒಳಪಡುತ್ತದೆಂದು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಅರ್ಜಿಯನ್ನು ಪುರಸ್ಕರಿಸುತ್ತಿದ್ದೇವೆ ಹಾಗೂ ಧನಂಜಯ ಪ್ರಕರಣದಲ್ಲಿ ವಿಭಾಗೀಯ ಪೀಠ ನೀಡಿರುವ ತೀರ್ಪು ಪಾಲನೆ ಮಾಡಬೇಕೆಂದು ಆದೇಶ ನೀಡುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.
೨೦೨೨ ರ ಜೂನ್ ೨೧ ರಂದು ನಮ್ಮ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಡಿ.ಎಂ. ದೇವೇಗೌಡ ಗಿ/s ಕರ್ನಾಟಕ ಸರಕಾರ ಮೊಕದ್ದಮೆಯಲ್ಲಿ ಕೊಟ್ಟ ತೀರ್ಪಿನಲ್ಲಿ ಹೇಳಿದ ಮಾತುಗಳು.
‘೨೦೧೯ರಲ್ಲಿಯೇ ನಮ್ಮ ರಾಜ್ಯದ ಉಚ್ಛ ನ್ಯಾಯಾಲಯ ಪರಿಭಾವಿತ ಅರಣ್ಯದ ಬಗ್ಗೆ ತೀರ್ಪು ಕೊಟ್ಟಿದ್ದು ಮತ್ತೆ ೨೦೨೨ರಲ್ಲಿ ಮತ್ತೆ ತನ್ನ ತೀರ್ಪನ್ನು ಪುನರುಚ್ಛರಿಸಿದ್ದರೂ ರಾಜ್ಯ ಸರಕಾರ ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ವಿಚಾರದೊಂದಿಗೆ ಮುಂದುವರಿಯುತ್ತಿರುವುದು ಖಂಡನಾರ್ಹವಾಗಿದೆ ಮತ್ತು ನ್ಯಾಯಾಲಯದ ನಿಂದನೆಯಾಗುತ್ತದೆ).’
ಇAದು ಸರಕಾರದ ಒಡೆತನದಲ್ಲಿರುವ ಅರಣ್ಯ ಪ್ರದೇಶದ ಸ್ಥಿತಿ ಏನು? ಅದನ್ನು ಕಬಳಿಸುವಲ್ಲಿ, ಅದರ ಜೀರ್ಣದಲ್ಲಿ ಇಲಾಖೆಗಳ ಪಾತ್ರ ಎಷ್ಟಿದೆ ಎನ್ನುವುದನ್ನು ಅಧ್ಯಯನ ಮಾಡಬೇಕು. ಆ ಅಧ್ಯಯನಕ್ಕೆ ಅಧಿಕಾರಿಗಳನ್ನು ನೇಮಿಸದೆ ಸ್ವತಂತ್ರ ಸಮಿತಿಯನ್ನು ನೇಮಿಸಬೇಕು.
- ಇ.ರಾ. ದುರ್ಗಾ ಪ್ರಸಾದ್, ಕರ್ನಾಟಕ ಕಾಫಿ ರೈತರ ಸಂಘ, ಕೊಡಗು ಘಟಕ.