ವೀರಾಜಪೇಟೆ, ಮೇ ೯: ವೀರಾಜಪೇಟೆ, ಪಟ್ಟಣದ ಮಹಿಳಾ ಸಮಾಜದಿಂದ ಬೇಟೋಳಿ ಅಂಗನವಾಡಿವರೆಗೆ ತೆರಳುವ ರಸ್ತೆಗೆ ಮಾಜಿ ಮಂತ್ರಿ ಹಾಗೂ ಶಿಕ್ಷಣ ತಜ್ಞ ಪಟ್ಟಡ ಸಿ. ಉತ್ತಯ್ಯ ಅವರ ಜ್ಞಾಪಕಾರ್ಥವಾಗಿ ಅವರ ಹೆಸರನ್ನು ತಾ. ೧೧ ರಂದು ಇಡಲು ತಿರ್ಮಾನಿಸಲಾಗಿದೆ ಎಂದು ಪಟ್ಟಡ ಕುಟುಂಬದ ಅಧ್ಯಕ್ಷ ಪೂವಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೧೮೯೧ ರಲ್ಲಿ ಬೇಟೋಳಿ ಗ್ರಾಮದಲ್ಲಿ ಜನಿಸಿದ ಪಿ.ಸಿ. ಉತ್ತಯ್ಯ ಅವರು ವೀರಾಜಪೇಟೆ ಮಡಿಕೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಮದ್ರಾಸ್ ಯೂನಿವರ್ಸಿಟಿಯಿಂದ ಬಿ.ಎ. ಪದವಿಯನ್ನು ಪಡೆದುಕೊಂಡರು. ಬಳಿಕ ಶಿಕ್ಷಕ ವೃತ್ತಿಯನ್ನು ಆರಿಸಿಕೊಂಡು, ಮಡಿಕೇರಿ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದರು. ಅಂದಿನ ಬ್ರೀಟಿಷ್ ಸರ್ಕಾರದಲ್ಲಿ ಲೈಸೆನ್ಸ್ ಆಫ್ ಟೀಚಿಂಗ್ ಪದವಿ ಪಡೆಯಲು ಮದ್ರಾಸ್ ಟೀರ‍್ಸ್ ಕಾಲೇಜಿಗೆ ತೆರಳಿ ಎಲ್.ಟಿ. ಪದವಿಯನ್ನು ಪಡೆದುಕೊಂಡರು. ವೀರಾಜಪೇಟೆಯಲ್ಲಿ ಹೈಸ್ಕೂಲ್ ಇಲ್ಲದ ಕಾರಣ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹೇರಿ ೧೯೨೨ ರಲ್ಲಿ ಹೈಸ್ಕೂಲ್ ಪ್ರಾರಂಭಿಸಿದರು. ೧೯೪೮ರಲ್ಲಿ ಡಿ.ಪಿ.ಒ. ಆಗಿ ನಿವೃತಿ ಹೊಂದಿದ ಬಳಿಕ ಕಾಂಗ್ರೆಸ್ ಪಕ್ಷ ಸೇರಿ ವೀರಾಜ ಪೇಟೆಯ ಮುನ್ಸಿಪಾಲಿಟಿಯ ಉಪಾಧ್ಯಕ್ಷರಾಗಿದ್ದರು. ಕೊಡಗು ಉಪಾದ್ರಿಯರ ಸಹಕಾರ ಸಂಘದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಸಿ. ರಾಜ್ಯವಾಗಿದ್ದ ಕೊಡಗಿನಲ್ಲಿ ೧೯೫೨ ರಲ್ಲಿ ವೀರಾಜಪೇಟೆ ಗ್ರಾಮಾಂತರ ಪ್ರದೇಶದಿಂದ ಎಂ.ಎಲ್.ಎ. ಆಗಿ ಆಯ್ಕೆಗೊಂಡು ನಾಲ್ಕು ವರ್ಷಗಳ ಕಾಲ ಶಿಕ್ಷಣದ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರಿಗಿದೆ. ಇವರು ೧೯೬೪ ರಲ್ಲಿ ಸ್ವರ್ಗಸ್ತರಾದರು ಎಂದು ಮಾಹಿತಿಯಿತ್ತರು.

ಕಾರ್ಯದರ್ಶಿ ಧನು ಉತ್ತಯ್ಯ ಮಾತನಾಡಿ, ಭಾನುವಾರದಂದು ೧೧ ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಡ ಒಕ್ಕಡ ಅಧ್ಯಕ್ಷ ಪೂವಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಮುಕ್ಕಾಟಿರ ಚೋಟು ಅಪ್ಪಯ್ಯ, ವೀರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರುಗಳಾದ ಮೋಹನ್ ಮುತ್ತಪ್ಪ, ಕವಿತಾ ಕಾರ್ಯಪ್ಪ, ಪ್ರಮೀಳಾ ಬೋಪಣ್ಣ, ಜ್ಯೋತಿ ರಾಜನ್ ಉಪಸ್ಥಿತರಿದ್ದರು.