ಮಡಿಕೇರಿ, ಮೇ. ೯ : ೨೦೨೫ ಮಾರ್ಚ್ -ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ ಕ್ಕೆ ಜಿಲ್ಲೆಯ ೧೭೧ ಪ್ರೌಢ ಶಾಲೆಗಳಿಂದ ೬೨೫೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೫೧೪೨ ವಿದ್ಯಾರ್ಥಿಗಳು ಪರೀಕ್ಷೆ-೧ ರಲ್ಲಿ ಉತ್ತೀರ್ಣರಾಗಿದ್ದು ಶೇ.೮೨.೨೧ ಫಲಿತಾಂಶ ದಾಖಲಾಗಿದೆ.

ಈ ಫಲಿತಾಂಶದಲ್ಲಿ ೧೧೫೯ ವಿದ್ಯಾರ್ಥಿಗಳ ಫಲಿತಾಂಶ ಅಪೂರ್ಣವಾಗಿತ್ತು. ಇದರಲ್ಲಿ ೧೦೯೯ ಜನ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ನೋಂದಣಿ ಆಗಿದ್ದಾರೆ. ಇನ್ನು ೬೦ ಜನ ನೋಂದಣಿ ಆಗಬೇಕಾಗಿದೆ. ಪರೀಕ್ಷೆಗೆ ನೋಂದಣಿ ಆಗಲು ತಾ ೧೦ (ಇಂದು) ಕೊನೆಯ ದಿನವಾಗಿದೆ. ಪರೀಕ್ಷೆಗೆ ಶುಲ್ಕ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳನ್ನು ನೋಂದಣಿ ಮಾಡಲು ಸಂಬAಧಿಸಿದ ಶಾಲಾ ಮುಖ್ಯ ಶಿಕ್ಷಕರು ಅಗತ್ಯ ಕ್ರಮವಹಿಸುವುದು. ಪರೀಕ್ಷೆ-೨ ತಾ. ೨೬ ರಿಂದ ತಾ. ೩೧ ರವರೆಗೆ ನಡೆಯಲಿದೆ.

ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆಯು ಸಿಸಿ.ಟಿ.ವಿ ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.