(ಪ್ರಜ್ಞಾ ಜಿ.ಆರ್.)
ಮಡಿಕೇರಿ, ಮೇ ೯: ಜೇನುಕುರುಬ, ಬೆಟ್ಟ ಕುರುಬ, ಯರವ ಮತ್ತು ಪಣಿಯ ಸಮುದಾಯಗಳ ೧೫೦ ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರು ನಾಗರಹೊಳೆ ಹುಲಿ ಮೀಸಲು ಪ್ರದೇಶದ ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡು ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಒತ್ತಾಯಿಸಿದ್ದಾರೆ. ಆದರೆ, ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, ಆ ಸ್ಥಳದಲ್ಲಿ ಈ ಹಿಂದೆ, ಅಂದರೆ ಡಿಸೆಂಬರ್ ೧೩, ೨೦೦೫ ರ ಮುಂಚಿತವಾಗಿ, ಯಾವದೇ ಬುಡಕಟ್ಟು ಆವಾಸಸ್ಥಾನ ಇರದ ಕಾರಣ ಅರಣ್ಯ ಹಕ್ಕು ಅರ್ಜಿಗಳು ಈ ಹಿಂದೆ ತಿರಸ್ಕರಿಸಲಾಗಿದೆಯಲ್ಲದೆ ಜುಲೈ ೨೫ ರ ತನಕ ಅರಣ್ಯಗಳ ‘ಸ್ಟೇಟಸ್ ಕೋ’ (ಯಥಾಸ್ಥಿತಿ) ಮುಂದುವರಿಯುವAತೆ ಸರಕಾರ ಆದೇಶ ಹೊರಡಿಸಿದೆ.
"ನಾವು ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ, ಆದರೆ ನಮ್ಮ ಪೂರ್ವಜರ ಭೂಮಿಯನ್ನು ಆಕ್ರಮಿಸಿಕೊಂಡಿದ್ದೇವೆ.
(ಮೊದಲ ಪುಟದಿಂದ) ಸುಮಾರು ೪೫ ವರ್ಷಗಳÀ ಹಿಂದೆ ನಮ್ಮನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನಮ್ಮ ಪೂರ್ವಜರ ಸ್ಥಳದಿಂದ ಹೊರಹಾಕಲಾಯಿತು. ಇದಾದ ನಂತರ, ನಾವು ಸುತ್ತಮುತ್ತಲಿನ ಪ್ರದೇಶಗಳ ಎಸ್ಟೇಟ್‌ಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದೇವೆ ಮತ್ತು ಅಂದಿನಿAದ ನಾವು ದಯನೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದೇವೆ. ಅರಣ್ಯ ಹಕ್ಕು ಕಾಯ್ದೆಯ ನಂತರ, ನಮ್ಮ ಪೂರ್ವಜರ ಭೂಮಿಯನ್ನು ಕಾನೂನುಬದ್ಧವಾಗಿ ಮತ್ತೆ ಆಕ್ರಮಿಸಿಕೊಳ್ಳುವ ಭರವಸೆಯನ್ನು ನಾವು ಕಂಡಿದ್ದೇವೆ. ನಮ್ಮನ್ನು ಪೂರ್ವಜರ ಭೂಮಿಯಿಂದ ಹೊರಹಾಕಿದ್ದು ಐತಿಹಾಸಿಕ ಅನ್ಯಾಯವಾಗಿದೆ ಮತ್ತು ನಾವು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದೇವೆ" ಎಂದು ಬುಡಕಟ್ಟು ನಾಯಕರಲ್ಲಿ ಒಬ್ಬರಾದ ಮತ್ತು ನಾಗರಹೊಳೆ ಆದಿವಾಸಿ ಬುಡಕಟ್ಟು ಅರಣ್ಯ ಹಕ್ಕುಗಳ ಅನುಷ್ಠಾನ ಸಮಿತಿಯ ಕಾರ್ಯದರ್ಶಿ ಜೇನು ಕುರುಬರ ಶಿವು ‘ಶಕ್ತಿ’ಯೊಂದಿಗೆ ಹೇಳಿಕೊಂಡರು.
೨೦೦೯-೧೦ ರಿಂದ ಅರಣ್ಯ ಹಕ್ಕು ಅನುಷ್ಠಾನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ವಿವರಿಸಿದರು. "ಅರಣ್ಯ ಹಕ್ಕು ಬಗ್ಗೆ ನಮಗೆ ತಿಳಿದ ನಂತರ, ಒಟ್ಟು ೫೨ ಬುಡಕಟ್ಟು ಕುಟುಂಬಗಳು ಅರಣ್ಯ ಹಕ್ಕಿನ ಮಂಜೂರಾತಿಗಾಗಿ ಅರಣ್ಯ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದೆವು" ಎಂದು ಅವರು ವಿವರಿಸಿದರು. ೨೦೨೧ ರಲ್ಲಿ ಜಂಟಿ ಪರಿಶೀಲನಾ ಪ್ರಕ್ರಿಯೆಯನ್ನು ಸರಕಾರ ಆದೇಶಿಸಿತಲ್ಲದೆ ೨೦೨೪ ರಲ್ಲಿ ಅರಣ್ಯ, ಕಂದಾಯ, ಬುಡಕಟ್ಟು ಕಲ್ಯಾಣ ಮತ್ತು ಪಂಚಾಯತ್ ರಾಜ್‌ನಿಂದ ಜಂಟಿ ಪರಿಶೀಲನೆಯನ್ನು ನಡೆಸಲಾಯಿತು ಎಂದು ಅವರು ಹೇಳಿದರು. "ಜಂಟಿ ಪರಿಶೀಲನೆಯ ವರದಿಯನ್ನು ನಾಲ್ಕು ತಿಂಗಳಲ್ಲಿ ಸಲ್ಲಿಸಬೇಕಾಗಿದ್ದರೂ, ಈವರೆಗೂ ಈ ಪ್ರಕ್ರಿಯೆ ನಡೆದಿರುವದಿಲ್ಲ. ಜಂಟಿ ಪರಿಶೀಲನೆಗೆ ಸಂಬAಧಪಟ್ಟ ಇಲಾಖಾ ಅಧಿಕಾರಿಗಳು ಸಹಿ ಮಾಡಿಲ್ಲ ಹಾಗೂ ಇದು ಸರ್ಕಾರಿ ಇಲಾಖೆಗಳ ಅಸಮರ್ಥತೆಯನ್ನು ಬಿಂಬಿಸುತ್ತದೆ" ಎಂದು ಅವರು ಆರೋಪಿಸಿದರು.
"ಆದರೆ ಈ ಬಾರಿ, ನಾವು ನಮ್ಮ ಪೂರ್ವಜರ ಭೂಮಿಯನ್ನು ಆಕ್ರಮಿಸಿಕೊಂಡಿದ್ದೇವೆ ಮತ್ತು ನಮ್ಮ ಹಕ್ಕುಗಳನ್ನು ನೀಡುವವರೆಗೆ ಅನಿರ್ದಿಷ್ಟ ಪ್ರತಿಭಟನೆ ಮುಂದುವರಿಯುತ್ತದೆೆ" ಎಂದು ಅವರು ಧ್ವನಿಗೂಡಿಸಿದರು. ಬುಡಕಟ್ಟು ಜನಾಂಗದವರು ಮೇ ೫ ರಿಂದ ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ಅರಣ್ಯ ವಲಯದೊಳಗೆ ತಮ್ಮ ದೇವತೆಗಳಿಗೆ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿದ್ದಾರೆ. ಈ ನಡುವೆ, ನಿವೃತ್ತ ಪಿಸಿಸಿಎಫ್ ಬಿಕೆ ಸಿಂಗ್‌ರವರು ರಾಜ್ಯದ ಮುಖ್ಯಮಂತ್ರಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದ ವಿರುದ್ಧ ಪುಕಾರು ಸಲ್ಲಿಸಿದ್ದಾರೆ. ಈ ಪುಕಾರಿನಲ್ಲಿ, ಸಿಂಗ್‌ರವರು ಅರಣ್ಯ ಹಕ್ಕು ಅನುಷ್ಠಾನದ ಅಡಿಯಲ್ಲಿ ಭೂಮಿ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಮುಂದುವರೆದು, ರಾಜ್ಯವು ಜುಲೈ ೨೫ ರವರೆಗೆ ಅರಣ್ಯಗಳಿಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು, ಯಾವುದೇ ಹೊಸ ಚಟುವಟಿಕೆಗಳು ಅಥವಾ ಬದಲಾವಣೆಗಳನ್ನು ತಡೆಯುತ್ತದೆ. ಇದಲ್ಲದೆ, ಬಿ.ಕೆ. ಸಿಂಗ್ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ಅರಣ್ಯ ಹಕ್ಕು ಕಾಯ್ದೆಯನ್ನು ಭೂ ಅನುದಾನವೆಂದು ಪರಿಗಣಿಸಬಾರದು ಮತ್ತು ಡಿಸೆಂಬರ್ ೧೩, ೨೦೦೫ ರ ನಂತರ ಅರಣ್ಯವನ್ನು ಆಕ್ರಮಿಸಿಕೊಂಡವರಿಗೆ ಭೂಮಿ ಮಂಜೂರು ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಂದುವರೆದು, ಅರಣ್ಯ ಇಲಾಖೆಯು ಬುಡಕಟ್ಟು ಆಕ್ರಮಿತ ಪ್ರದೇಶದಲ್ಲಿ ಯಾವುದೇ ಬುಡಕಟ್ಟು ಹಳ್ಳಿ ಇರಲಿಲ್ಲ ಎಂದೂ, ಉಪಗ್ರಹ ಚಿತ್ರಗಳ ಪ್ರಕಾರ ಇಲ್ಲಿ ಈ ಹಿಂದೆ, ಅಂದರೆ ೧೩ ಡಿಸೆಂಬರ್ ೨೦೦೬ ರ ಮುಂಚಿತವಾಗಿ, ಈ ಪ್ರದೇಶದಲ್ಲಿ ಮಾನವ ಆವಾಸಸ್ಥಾನದ ಅಸ್ತಿತ್ವವನ್ನು ತೋರಿಸುವುದಿಲ್ಲ ಎಂದು ೨೦೦೯ ರ ಸಮಯದಲ್ಲಿ ಭೂ ಹಕ್ಕಿಗಾಗಿ ಸಲ್ಲಿಸಿದ್ದ ಅರ್ಜಿಗಳು ೨೦೧೧ ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದ್ದವು. ಬುಡಕಟ್ಟು ಜನಾಂಗದವರು ೨೦೦೯ ರಲ್ಲಿ ಅರಣ್ಯ ಹಕ್ಕು ಅಡಿಯಲ್ಲಿ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸಿದ್ದರೂ, ಅದನ್ನು ೨೦೧೧ ರಲ್ಲಿ ತಿರಸ್ಕರಿಸಲಾಯಿತು. ಆದರೂ, ೨೦೧೯ ರಲ್ಲಿ ಅರ್ಜಿಗಳ ಮರು ಪರಿಶೀಲನಾ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತು ಮತ್ತು ೨೦೨೪ ರಲ್ಲಿ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶದ ಮರು ಪರಿಶೀಲನೆಯನ್ನು ನಡೆಸಲಾಯಿತು. ಆದರೂ, ಮರು ಪರಿಶೀಲನಾ ದತ್ತಾಂಶದ ವರದಿಯನ್ನು ಇಲ್ಲಿಯವರೆಗೆ ಉಪ ವಿಭಾಗೀಯ ಮಟ್ಟದ ಸಮಿತಿ ಮತ್ತು ಜಿಲ್ಲಾ ಮಟ್ಟದ ಸಮಿತಿ ಸಲ್ಲಿಸಿಲ್ಲ, ಇದನ್ನು ಬುಡಕಟ್ಟು ಜನಾಂಗದವರು ವಿರೋಧಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
“ಬುಡಕಟ್ಟು ಜನಾಂಗದವರು ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳಿರುವುದರಿಂದ ನಾವು ಅವರನ್ನು ಬಲವಂತವಾಗಿ ಹೊರಹಾಕಲು ಸಾಧ್ಯವಿಲ್ಲ. ಮುಂದುವರೆದು, ನಿವೃತ್ತ ಪಿಸಿಸಿಎಫ್ ಬಿ.ಕೆ. ಸಿಂಗ್ ರಾಜ್ಯದ ಮುಖ್ಯಮಂತ್ರಿಗಳಿಗೆ ಅರಣ್ಯ ಹಕ್ಕು ಅನುಷ್ಠಾನದ ವಿರುದ್ಧ ಅರ್ಜಿ ಸಲ್ಲಿಸಿರುತ್ತಾರೆ. ಅಲ್ಲದೆ, ಜುಲೈ ೨೫ ರವರೆಗೆ ಅರಣ್ಯಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ಆದೇಶವೂ ಇದೆ,” ಎಂದು ನಾಗರಹೊಳೆ ವಿಭಾಗದ ಎಸಿಎಫ್ ಅನನ್ಯ ಕುಮಾರ್ ದೃಢಪಡಿಸಿದರು.