ಗೋಣಿಕೊಪ್ಪಲು, ಮೇ ೯: ಪಟ್ಟಣ ಪಂಚಾಯಿತಿಯಿAದ ಪುರಸಭೆಯಾಗಿ ಮಾರ್ಪಟ್ಟ ವೀರಾಜಪೇಟೆ ಪಟ್ಟಣದ ೧೫ ಕಿ.ಮೀ.ಗೂ ಅಧಿಕ ನಾಲೆಯ ಹೂಳೆತ್ತುವ ಕಾರ್ಯವನ್ನು ಕೈಗೊಳ್ಳುವ ಮೂಲಕ ಮುಂದಿನ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ವೀರಾಜಪೇಟೆ ಪುರಸಭೆಯು ನಾಲೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದೆ.

ಹಲವು ದಶಕಗಳಿಂದ ವೀರಾಜಪೇಟೆಯಲ್ಲಿರುವ ನಾಲೆಯಲ್ಲಿ ಹೂಳು ತುಂಬಿ ಮಳೆಗಾಲದಲ್ಲಿ ನೀರು ಹರಿಯುವ ಸಂದರ್ಭ ನಾಲೆಯಲ್ಲಿ ನೀರು ಹೆಚ್ಚಾಗಿ, ಈ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿತ್ತು. ಅಲ್ಲದೆ ನಾಲೆಯ ಬದಿಯಲ್ಲಿರುವ ಮನೆಗಳಿಗೆ ನೀರು ತುಂಬಿ ಸಮಸ್ಯೆ ಎದುರಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಮಳೆಗಾಲಕ್ಕೂ ಮುನ್ನವೇ ವೀರಾಜಪೇಟೆ ಪುರಸಭೆ ಆಡಳಿತ ಮಂಡಳಿ ಒಮ್ಮತದ ನಿರ್ಧಾರ ಕೈಗೊಂಡು ಮುಂಜಾಗ್ರತಾ ಕ್ರಮವಾಗಿ ನಾಲೆ ಹರಿಯುವ ಎಲ್ಲಾ ಭಾಗದಲ್ಲೂ ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿಗಳು ಭರದಿಂದ ಸಾಗುತ್ತಿದೆ.

ಹೂಳೆತ್ತುವ ಕಾಮಗಾರಿಯನ್ನು ವೀರಾಜಪೇಟೆ ಪುರಸಭೆಯ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಖುದ್ದಾಗಿ ಪರಿಶೀಲಿಸುವ ಮೂಲಕ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು. ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಹಲವು ದಶಕಗಳಿಂದ ನಾಲೆಯಲ್ಲಿ ಹೂಳು ತುಂಬಿ ಮಳೆಗಾಲ ಸಂದರ್ಭ ನಾಲೆಯಲ್ಲಿ ನೀರು ಹರಿಯುವ ವೇಳೆ ಮನೆಗಳಿಗೆ ನೀರು ಹತ್ತುವುದು ಹಾಗೂ ಹಲವು ಸಮಸ್ಯೆಗಳನ್ನು ಕಂಡಿದ್ದೇವೆ.

ಈ ನಿಟ್ಟಿನಲ್ಲಿ ಈ ಬಾರಿ ಸುಮಾರು ೧೫ ಕಿ.ಮೀ. ಸುತ್ತಳತೆಯ ನಾಲೆಯನ್ನು ಶುಚಿತ್ವಗೊಳಿಸುವ ಮೂಲಕ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಇದರಿಂದ ಮುಂಬರುವ ಮಳೆಗಾಲದಲ್ಲಿ ನಾಲೆಯ ಬದಿಯಲ್ಲಿ ವಾಸಿಸುವ ಜನತೆಗೆ ಯಾವುದೇ ಸಮಸ್ಯೆ ಎದುರಾಗದಂತೆ ಮುನೆÀ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಾಮಗಾರಿ ಪರಿಶೀಲನೆ ವೇಳೆ ವೀರಾಜಪೇಟೆ ಪುರಸಭೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಪೂರ್ಣಿಮ ಸಚಿನ್, ಪುರಸಭಾ ಸದಸ್ಯರುಗಳಾದ ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ, ಪಟ್ಟಡ ರಂಜಿ ಪೂಣಚ್ಚ, ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಪುರಸಭೆಯ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

- ಹೆಚ್.ಕೆ. ಜಗದೀಶ್