ಮಡಿಕೇರಿ, ಮೇ ೭: ಮರಗೋಡು ಈವ್ನಿಂಗ್ ಸ್ಟಾರ್ ವತಿಯಿಂದ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದ್ದು, ತಾ. ೮ ರಂದು (ಇಂದು) ತಂಡಗಳ ನಡುವೆ ಸೆಮಿಫೈನಲ್ ಪ್ರವೇಶಕ್ಕೆ ಕಾದಾಟ ನಡೆಯಲಿದೆ.

ಬುಧವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ೮ ತಂಡಗಳು ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿವೆ.

ಫಲಿತಾಂಶದ ವಿವರ

ಕೋಳಿಮಾಡು ವಿರುದ್ಧ ಕಡ್ಲೇರ ೧ ರನ್ ಅಂತರದ ಗೆಲುವು ಸಾಧಿಸಿತು. ಕೋಳಿಮಾಡು ೫ ವಿಕೆಟ್ ನಷ್ಟಕ್ಕೆ ೬೧ ರನ್ ದಾಖಲಿಸಿತು. ಕಡ್ಲೇರ ೬೨ ರನ್ ಪೇರಿಸಿ ಮುಂದಿನ ಹಂತ ಪ್ರವೇಶಿಸಿತು.

ಮೂವನ ವಿರುದ್ಧ ಉಳುವಾರ ಜಯ ಪಡೆಯಿತು. ಮೊದಲು ಬ್ಯಾಟ್ ಮಾಡಿದ ಮೂವನ ೭ ವಿಕೆಟ್ ನಷ್ಟಕ್ಕೆ ೬೧ ದಾಖಲಿಸಿತು. ಗುರಿ ಬೆನ್ನತ್ತಿದ ಉಳುವಾರನ ೪.೧ ಓವರ್‌ಗಳಲ್ಲಿಯೇ ೬೨ ರನ್ ಪೇರಿಸಿ ಜಯ ಪಡೆಯಿತು.

ಪಾಣತ್ತಲೆ ವಿರುದ್ಧ ತಳೂರು ಭರ್ಜರಿ ೫೪ ರನ್‌ಗಳ ಅಂತರದ ಗೆಲುವು ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿ ತಳೂರು ೫ ವಿಕೆಟ್ ನಷ್ಟಕ್ಕೆ ೧೨೮ ರನ್ ಬಾರಿಸಿತು. ಗುರಿ ಬೆನ್ನತ್ತಿದ ಪಾಣತ್ತಲೆ ಕೇವಲ ೭೪ ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಅನುಭವಿಸಿತು.

ಸಣ್ಣಜನ ವಿರುದ್ಧ ಕೆದಂಬಾಡಿ ಗೆಲುವಿನ ರುಚಿ ಕಂಡಿತು. ಕೆದಂಬಾಡಿ ನೀಡಿದ್ದ ೯೦ ರನ್ ಗುರಿ ಸಾಧನೆಯಲ್ಲಿ ವಿಫಲವಾದ ಸಣ್ಣಜನ ೭೩ ರನ್‌ಗಳ ನಷ್ಟೇ ದಾಖಲಿಸಿ ಪರಾಜಿತಗೊಂಡಿತು.

ಬಿಳಿಯಂಡ್ರ ವಿರುದ್ಧ ಪಾರೆಮಜಲು ೧ ರನ್‌ಗಳಲ್ಲಿ ಸೋಲುವಂತಾಯಿತು. ಬಿಳಿಯಂಡ್ರ ೨ ವಿಕೆಟ್ ನಷ್ಟಕ್ಕೆ ೫೫ ರನ್ ದಾಖಲಿಸಿದರೆ, ಪಾರೆಮಜಲು ೬ ವಿಕೆಟ್ ಕಳೆದುಕೊಂಡು ೫೪ ರನ್ ದಾಖಲಿಸಿ ಸೋಲಿನ ಆಘಾತಕ್ಕೊಳಗಾ ಯಿತು. ತೆಕ್ಕಡೆ ವಿರುದ್ಧ ಪರ್ಲಕೋಟಿ ೨೪ ರನ್ ಅಂತರದ ಗೆಲುವು ತನ್ನದಾಗಿಸಿಕೊಂಡಿತು. ಪರ್ಲಕೋಟಿ ೭ ವಿಕೆಟ್ ನಷ್ಟಕ್ಕೆ ೫೮ ರನ್ ಬಾರಿಸಿತು. ತೆಕ್ಕಡೆ ೫ ವಿಕೆಟ್ ನಷ್ಟಕ್ಕೆ ೩೪ ರನ್ ಮಾತ್ರ ಗಳಿಸಿ ಸೋಲು ಅನುಭವಿಸಿತು.

ತೇನನ ವಿರುದ್ಧ ಕುದುಪಜೆ ಗೆದ್ದಿತು. ಮೊದಲು ಬ್ಯಾಟ್ ಮಾಡಿದ ತೇನನ ೬ ವಿಕೆಟ್ ನಷ್ಟಕ್ಕೆ ೬೬ ರನ್ ಬಾರಿಸಿತು. ಕುದುಪಜೆ ೬ ಓವರ್‌ಗಳಲ್ಲಿಯೇ ೩ ವಿಕೆಟ್ ನಷ್ಟಕ್ಕೆ ೬೭ ರನ್ ದಾಖಲಿಸಿ ಗೆಲುವು ಪಡೆಯಿತು.

ಕಟ್ಟೆಮನೆ ವಿರುದ್ಧ ಇಲಂದಿಲ ಪರಾಭವಗೊಂಡಿತು. ಕಟ್ಟೆಮನೆ ೪ ವಿಕೆಟ್ ನಷ್ಟಕ್ಕೆ ೮೯ ರನ್ ದಾಖಲಿಸಿತು. ಇಲಂದಿರ ೮೬ ರನ್ ಸಂಗ್ರಹಿಸಿ ಸೋಲು ಕಂಡಿತು.