ಈ ಹೆಸರಿನಲ್ಲಿ ಬುಧವಾರ ಸೂರ್ಯೋದಯವಾಗುವುದರೊಳಗಾಗಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಕೇಂದ್ರಗಳ ಮೇಲೆ ಭಾರತೀಯ ಸೇನಾಪಡೆಯಿಂದ ನಡೆದ ದಾಳಿ ಅತ್ಯಂತ ವ್ಯವಸ್ಥಿತವಾಗಿರುವ ಮೂಲಕ ಜಗತ್ತಿನ ಗಮನ ಸೆಳೆದಿದೆ.

ಯಾರೂ ನಿರೀಕ್ಷಿಸದೇ ಇರುವ ರೀತಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಅತಿಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಈ ದಾಳಿ ನಡೆದಿದೆ. ಬುಧವಾರ ದೇಶವ್ಯಾಪಿ ಯುದ್ಧ ಸಂದರ್ಭ ಸುರಕ್ಷತೆಯ ಅಣಕು ಪ್ರದರ್ಶನದ ಬಗ್ಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೈರನ್ ಕೇಳಿದೊಡನೆ ಸಾರ್ವಜನಿಕರು ಏನು ಮಾಡಬೇಕೆಂಬ ತರಬೇತಿಯನ್ನು ಕೊಡುವ ಅಣಕು ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ಕೊಡಲಾಗಿತ್ತು. ಪಾಕಿಸ್ತಾನ ಸೇರಿದಂತೆ ಬಹುತೇಕರ ಗಮನ ಈ ಕಾರ್ಯಕ್ರಮದತ್ತ ಕೇಂದ್ರೀಕೃತವಾಗಿರುವAತೆಯೇ ಅಚ್ಚರಿಯ ದಾಳಿಯಲ್ಲಿ ನಸುಕಿನ ವೇಳೆ ಪಾಕ್ ಮತ್ತು ಪಾಕ್ ಅತಿಕ್ರಮಿತ ಕಾಶ್ಮೀರದ ಭಯೋತ್ಪಾದನಾ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ವಾಯುದಾಳಿ ನಡೆಸಿ ೯ ನೆಲೆಗಳಲ್ಲಿ ಆಶ್ರಯ ಪಡೆದಿದ್ದ ಸುಮಾರು ೧೦೦ ಉಗ್ರರು ಮತ್ತು ಉಗ್ರ ಬೆಂಬಲಿಗರನ್ನು ಹೊಸಕಿಹಾಕುವಲ್ಲಿ ಯಶಸ್ವಿಯಾಗಿದೆ.

ನಿದ್ದೆಯ ಮಂಪರಿನಲ್ಲಿದ್ದ ಉಗ್ರರಿಗೆ ಏನಾಗುತ್ತಿದೆ ಎಂದು ಗೊತ್ತೇ ಆಗದಂತೆ ಕ್ಷಿಪಣಿ ಹಾಗೂ ಆತ್ಮಾಹುತಿ ಡ್ರೋನ್ ದಾಳಿ ನಡೆಸಿ ಅವರ ಜೀವವನ್ನು ಪ್ರತೀಕಾರವಾಗಿ ಪಡೆಯಲಾಗಿದೆ. ಏಪ್ರಿಲ್ ೨೨ ರಂದು ಮಧ್ಯಾಹ್ನ ೨.೩೦ ಗಂಟೆಯಲ್ಲಿ ಶ್ರೀನಗರದ ಹೆಸರಾಂತ ಪ್ರವಾಸಿ ತಾಣ ಪೆಹಲ್ಗಾಮ್ ನಲ್ಲಿದ್ದ ೨೬ ಹಿಂದೂ ಪ್ರವಾಸಿಗರ ತಲೆಗೆ ಅವರ ಪತ್ನಿಯರು, ಮಕ್ಕಳು ಮುಂದೆ ಗುಂಡಿಟ್ಟು ಹತ್ಯೆ ಮಾಡಿ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದವರ ಮೇಲೆ ಕೊನೆಗೂ ವಾಯುಪಡೆಯ ಮೂಲಕ ಭಾರತ ಪ್ರತೀಕಾರ ಪಡೆದಿದೆ.

ಈ ಪ್ರತೀಕಾರದ ದಾಳಿಗೆ ಭಾರತೀಯ ಸೇನಾಪಡೆ ಇಟ್ಟ ಹೆಸರು ಆಪರೇಷನ್ ಸಿಂಧೂರ್ ಎಂಥ ಚಂದದ,.. ಅರ್ಥಪೂರ್ಣ ಹೆಸರಿದು. ಪೆಹಲ್ಗಾಮ್‌ನಲ್ಲಿ ೨೬ ಗೃಹಿಣಿಯರ ಸಿಂಧೂರ ಅಳಿಸಿ ಹಾಕಿದ ಭೀಭತ್ಸ ಹತ್ಯೆಗೆ ಪ್ರತೀಕಾರವಾಗಿ ನಡೆದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂಬ ಹೆಸರಿಟ್ಟು, ಹಿಂದೂಗಳಿಗೆ ಅತ್ಯಮೂಲ್ಯವಾಗಿರುವ ಸಿಂಧೂರದ ಮಹತ್ವವನ್ನು ಜಗತ್ತಿಗೆ ಭಾರತ ತಿಳಿಸಿಕೊಟ್ಟಿದೆ.

ಪೆಹಲ್ಗಾಮ್ ದಾಳಿ ನಡೆದ ಬಳಿಕ ಬಿಹಾರದಲ್ಲಿ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದ ಪ್ರಧಾನಿ ಮೋದಿ, ಈ ಘಟನೆಗೆ ಕಾರಣರಾದವರನ್ನು ಖಂಡಿತಾ ಬಿಡುವುದಿಲ್ಲ ಎಂದು ಗುಡುಗಿದ್ದರು.

ಪೆಹಲ್ಗಾಮ್ ದುರಂತ ಸಂಭವಿಸಿದ ಕೂಡಲೇ ಅನೇಕ ಭಾರತೀಯರು ಮತ್ತು ಬಹುತೇಕ ಭಾರತೀಯ ಮಾಧ್ಯಮಗಳು ಈಗಲೇ ಪಾಕ್ ವಿರುದ್ದ ಯುದ್ದ ಮಾಡಿ ಪಾಕಿಸ್ತಾನಿಗಳಿಗೆ ಸರಿಯಾದ ಪಾಠ ಕಲಿಸಿ ಎಂದು ಬೊಬ್ಬಿಟ್ಟರು. ಆದರೆ, ಕೇಂದ್ರ ಸರ್ಕಾರ ಯಾವುದೇ ದೀಢಿರ್ ನಿರ್ಧಾರವನ್ನು ಯುದ್ಧದ ನಿಟ್ಟಿನಲ್ಲಿ ಕೈಗೊಳ್ಳದೇ ಅತ್ಯಂತ ಸೂಕ್ಷö್ಮವಾಗಿ, ಕರಾರುವಕ್ಕಾದ ರೀತಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿತು. ಯಾಕೆಂದರೆ ಯುದ್ದ ಮಾಡಿದ ಕೂಡಲೇ ಸಂಭವಿಸಬಹುದಾದ ಸಂಕಷ್ಟಗಳ ಅರಿವು ಭಾರತಕ್ಕಿತ್ತು. ವಿಶ್ವಮಟ್ಟದಲ್ಲಿ ಎದುರಿಸಬೇಕಾದ ಸವಾಲುಗಳು, ವಿಶ್ವಸಂಸ್ಥೆಗೆ ನೀಡಬೇಕಾದ ಉತ್ತರದ ಬಗ್ಗೆಯೂ ಕೇಂದ್ರ ಸರ್ಕಾರದ ತಿಳುವಳಿಕೆಯಲ್ಲಿತ್ತು. ಹೀಗಾಗಿಯೇ ಸಮರದ ಬದಲಿಗೆ ಮೊದಲು ಉಗ್ರ ನೆಲೆಗಳ ಸಂಹಾರಕ್ಕೆ ಭಾರತ ಸರ್ಕಾರ ಆದ್ಯತೆ ನೀಡಿತು. ಉಗ್ರರ ನೆಲೆಗಳನ್ನು ಸಂಹರಿಸಿದರೆ ವಿಶ್ವದಾದ್ಯಂತಲಿನ ದೇಶಗಳೂ ಭಾರತದ ಬೆಂಬಲಕ್ಕೆ ಬಂದೇ ಬರುತ್ತವೆ. ಜಗತ್ತಿನ ಎಲ್ಲಾ ದೇಶಗಳಿಗೂ ಸಂಕಷ್ಟ ತಂದಿಟ್ಟಿರುವ ಉಗ್ರರನ್ನು ಫೋಷಿಸುತ್ತಿರುವ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲಿನ ಧಾಳಿಯನ್ನು ತಪ್ಪು ಎಂದು ಯಾವುದೇ ದೇಶಗಳು ಹೇಳಲಿಕ್ಕಿಲ್ಲ. ಬದಲಿಗೆ ಉಗ್ರರ ಸಂಹಾರಕ್ಕೆ ಮುಂದಾದ ಭಾರತಕ್ಕೆ ಬೆಂಬಲ ನೀಡುವುದರೊಂದಿಗೆ ಭಾರತದ ಈ ದಾಳಿಯನ್ನು ಬೆಂಬಲಿಸಲಿವೆ ಎಂಬ ಲೆಕ್ಕಾಚಾರವೂ ಭಾರತಕ್ಕಿತ್ತು.

ಹೀಗಾಗಿಯೇ ಸಮರದ ಬದಲಿಗೆ ಮೊದಲ ಹಂತದ ಆಯ್ಕೆಯಾಗಿ ಉಗ್ರರ ನೆಲೆಗಳ ಧ್ವಂಸದ ನಿರ್ಧಾರಕ್ಕೆ ಕೇಂದ್ರ ಬಂದಿತ್ತು. ಮುಂದಿನ ಹಂತವಾಗಿ ಪಾಕಿಸ್ತಾನವೇನಾದರೂ ಭಾರತದ ಮೇಲೆ ಪ್ರತಿದಾಳಿ ನಡೆಸಿದರೆ ಆ ಸಂದರ್ಭ ಖಂಡಿತವಾಗಿಯೂ ಭಾರತದ ಸಮರದ ಆಯ್ಕೆಗೆ ಮುಂದಾಗಲಿದೆ. ಈ ರೀತಿಯ ಯುದ್ಧಕ್ಕೆ ಭಾರತಕ್ಕೆ ಸಮರ್ಥನೆಯೂ ದೊರಕಲಿದೆ.

೨೪ ನಿಮಿಷದೊಳಗಾಗಿ ವಾಯುದಾಳಿಯನ್ನು ಕೈಗೊಂಡು ಉಗ್ರ ಸಂಹಾರದ ತನ್ನ ಗುರಿಯನ್ನು ಭಾರತ ಸಾಧಿಸಿದೆ. ವಿಶ್ವದ ಪ್ರಮುಖ ಭಯೋತ್ಪಾದಕ ಭಾರತದ ಸಂಸತ್ ಮೇಲಿನ ದಾಳಿ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಮಸೂದ್‌ನ ಕುಟುಂಬದ ೧೪ ಸದಸ್ಯರೂ ವಾಯುದಾಳಿ ಸಂದರ್ಭ ಹತರಾಗಿದ್ದಾರೆ. ಉಗ್ರರಿಗೆ ತರಬೇತಿ ನೀಡುತ್ತಿದ್ದ ಅನೇಕ ನೆಲೆಗಳೂ ಸರ್ವನಾಶವಾಗಿವೆ. ತರಬೇತಿ ಕೇಂದ್ರಗಳು ಶಸ್ತ್ತಾಸ್ತ್ರ, ಉಪಕರಣಗಳೂ ನಾಶವಾಗಿವೆ.

ಭಾರತದ ಸೇನಾಪಡೆ ಎಷ್ಟೆಲ್ಲಾ ಎಚ್ಚರಿಕೆಯನ್ನು ದಾಳಿ ಸಂದರ್ಭ ತೆಗೆದುಕೊಂಡಿತು ಎಂದರೆ, ಎಲ್ಲಿಯೂ ಪಾಕಿಸ್ತಾನದ ಸಾರ್ವಜನಿಕ ನೆಲೆಗಳಿಗೆ ಹಾನಿಯಾಗದಂತೆ, ಪಾಕಿಸ್ತಾನದ ಸೇನಾನೆಲೆಗಳ ಮೇಲೆ ದಾಳಿಯಾಗದಂತೆ ನೋಡಿಕೊಂಡಿದೆ.

ಭಾರತ ಯುದ್ಧಕ್ಕೂ ಸಿದ್ದವಿದೆ ಎಂಬ ಸಂದೇಶವನ್ನು ಉಗ್ರ ಸಂಘಟನೆಗಳ ವಾಯುದಾಳಿಯಿಂದ ಭಾರತ ದೇಶವು ಜಗತ್ತಿಗೇ ಸಾರಿದೆ. ತಾನಾಗಿಯೇ ಪಾಕ್ ವಿರುದ್ದ ಯುದ್ಧಕ್ಕೆ ಹೋಗದ ಭಾರತವು ಮೊದಲು ಉಗ್ರ ನಿಗ್ರಹಕ್ಕೆ ಮುಂದಾಗಿ ನಂತರದ ಹಂತದಲ್ಲಿ ಸಮರದ ಆಯ್ಕೆಗೆ ಮುಂದಾಗಬಹುದು. ಯುದ್ಧ ಪರಿಸ್ಥಿತಿ ನಿರ್ಮಾಣಲಾದಲ್ಲಿ ಭೂ, ವಾಯು, ನೌಕಸೇನಾ ಪಡೆ ಸಿದ್ದವಾಗಿದೆ ಎಂಬುದನ್ನು ಕಳೆದ ೨೦ ದಿನಗಳಲ್ಲಿ ಭಾರತ ನಿರೂಪಿಸಿದೆ. ಈಗಗಲೇ ಸೈನಿಕರ ರಜೆ ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಅಂದರೆ, ಎಲ್ಲಾ ರೀತಿಯ ಸಿದ್ಧತೆ ಕೈಗೊಂಡೇ ಭಾರತ ದೇಶವೀಗ ತನ್ನ ಪ್ರತೀ ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇರಿಸುತ್ತಿದೆ. ಯುದ್ಧ ಪ್ರಾರಂಭಿಸಿದ ನಂತರ ಯಾವದೇ ರೀತಿಯ ಮುಜುಗರದ ಸ್ಥಿತಿ ನಿರ್ಮಾಣವಾಗದಂತೆ ಮುಂಜಾಗ್ರತೆಯಿAದಲೇ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

ಭಾರತ ಕಾರ್ಯಾಚರಣೆಗಿಳಿಯುವುದು ಕೊಂಚ ತಡವಾದೀತು. ಆದರೆ.. ಪಕ್ಕಾ ಕಾರ್ಯಾಚರಣೆ.. ಯಶಸ್ವಿ ಕಾರ್ಯಾಚರಣೆ.. ಗುರಿ ತಲುಪಿ ನಿಗದಿತ ಉದ್ದೇಶ ಸಂಪೂರ್ಣಗೊಳಿಸುವುದು ಪಕ್ಕಾ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಆಪರೇಷನ್ ಸಿಂಧೂರದ ಮೂಲಕ ಭಾರತೀಯ ಯೋಧಪಡೆ ಇನ್ನೊಮ್ಮೆ ತಾವು ಎಷ್ಟೊಂದು ಸಮರ್ಥರಿದ್ದೇವೆ ಎಂದು ಭಾರತೀಯರು ಹೆಮ್ಮೆಪಡುವಂತೆ ಗರ್ವ ಪಡುವಂತೆ ಮಾಡಿದ್ದಾರೆ.

ನೆನಪಿರಲಿ.. ಭಯೋತ್ಪಾದಕರು ಕೇವಲ ೧೦೦-೨೦೦ ಮಾತ್ರವೇ ಅಲ್ಲ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉಗ್ರರಿಗೆ ಬೆಂಬಲ ನೀಡುವ, ಆಶ್ರಯ ನೀಡುವ ಸಾವಿರಾರು ಜನರಿದ್ದಾರೆ. ನೂರಾರು ಸಂಘಟನೆಗಳು ಬೇರೆ ಬೇರೆ ಹೆಸರಿನಲ್ಲಿವೆ. ಹೀಗಾಗಿ ಒಂದು ರಾತ್ರಿಯ ವಾಯುದಾಳಿಯಿಂದಾಗಿ ಉಗ್ರರ ಸಂಪೂರ್ಣ ಸಂಹಾರ ಖಂಡಿತಾ ಆಗಿಲ್ಲ. ಇದು ಭಯೋತ್ಪಾದಕರ ವಿರುದ್ಧ ನಿಜವಾದ ಯುದ್ಧದ ಮೊದಲ ಆರಂಭ..

ಇದು ಖಂಡಿತಾ ಅಂತ್ಯವಲ್ಲ..... ಒಂದು ಮಹತ್ವದ ಇತಿಹಾಸ ಸೃಷ್ಟಿಸುವ ಕಾಲಘಟ್ಟದ ... ಪ್ರಾರಂಭ...!!!! -ಅನಿಲ್ ಎಚ್.ಟಿ.

ಯಾರು ಇಟ್ಟರು ಈ ಹೆಸರು ಸಿಂಧೂರ್?!

ಆಪರೇಷನ್ ಸಿಂಧೂರ್ - ಈ ಹೆಸರಿನ ಮೂಲಕ ನಡೆದ ವಾಯುಧಾಳಿಯ ಬಗ್ಗೆ ಎಲ್ಲರಿಂದಲೂ ಪಕ್ಷ, ಧರ್ಮಾತೀತವಾಗಿ ಶ್ಲಾಘನೆ ವ್ಯಕ್ತವಾಗುತ್ತಿದೆ. ೨೬ ಮಹಿಳೆಯರ ಸಿಂಧೂರ ಕಸಿದವರನ್ನು ಮಟ್ಟಹಾಕುವ ಕಾರ್ಯಾಚರಣೆಗೆ ಸಿಂಧೂರ್ ಎಂಬ ಹೆಸರಿಟ್ಟು ಸೊನ್ನೆಯೊಳಗಡೆ ಕುಂಕುಮದ ಬಣ್ಣ ಹಾಕಿದ ಭಾರತೀಯ ಸೇನಾಪಡೆಯ ಸಿಂಧೂರ್ ಶೀರ್ಷಿಕೆ ಎಲ್ಲರ ಗಮನ ಸೆಳೆದಿದೆ. ಇಂಥಹ ಸಿಂಧೂರ್ ಹೆಸರನ್ನು ಕಾರ್ಯಾಚರಣೆಗೆ ಇರಿಸಿದ್ದೇ ಪ್ರಧಾನಿ ಮೋದಿಯವರು ಈ ಬಗ್ಗೆ ಭಾರತೀಯ ಸೇನಾ ಪಡೆ ಖಚಿತಪಡಿಸಿದೆ. ಮಾತ್ರವಲ್ಲ.. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಯುವ ಸಂದರ್ಭ ರಾತ್ರಿಯಿಡೀ ಮೋದಿಯವರು, ರಕ್ಷಣಾ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್ ಶಾ, ರಾಷ್ಟಿçÃಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜತೆಗೂಡಿ ಕಾರ್ಯಾಚರಣೆಯ ಪ್ರತೀ ಕ್ಷಣದ ಮಾಹಿತಿ ಪಡೆಯುತ್ತಿದ್ದರು.

ಇಲ್ಲಿ ಮತ್ತೊಂದು ಅಂಶವೂ ಗಮನಾರ್ಹ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತಾಗಿ ಸುದ್ದಿಗೋಷ್ಠಿಯ ಮುಖಾಂತರ ಇಡೀ ಜಗತ್ತಿಗೆ ಮಾಹಿತಿ ನೀಡಲು ನಿಯೋಜಿತರಾಗಿದ್ದೂ ಕೂಡ ಈರ್ವರು ಮಹಿಳಾ ಅಧಿಕಾರಿಗಳು.

ವಾಯುಸೇನೆಯ ಕರ್ನಲ್ ಸೋಫಿಯಾ ಖುರೇಷಿ (೩೫ ವರ್ಷ) ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, (೩೮) ಆಪರೇಷನ್ ಸಿಂಧೂರದ ಮಾಹಿತಿ ನೀಡುವ ಮೂಲಕ ಭಾವುಕತೆಯ ಕ್ಷಣಗಳಿಗೆ ಕಾರಣರಾದರು. ಈ ಈರ್ವರೂ ದಿಟ್ಟ ಮಹಿಳಾ ಅಧಿಕಾರಿಗಳು ಸೇನೆಯಲ್ಲಿ ಸಾಕಷ್ಟು ಸಾಧನೆಗಳ ಮೂಲಕ ದಾಖಲೆ ಮಾಡಿದ್ದಾರೆ. ಇಂಥಹ ಮಹಿಳಾ ಅಧಿಕಾರಿಗಳನ್ನೇ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಿರ್ವಹಣೆಗೆ ಭಾರತೀಯ ಸೇನಾಪಡೆ ನಿಯೋಜಿಸಿದ್ದು ವಿಶೇಷ.