ಸಿದ್ದಾಪುರ, ಮೇ ೭: ಬಾಡಗ ಬಾಣಂಗಾಲ ಗ್ರಾಮದ ಮಠದಲ್ಲಿ ಮುಂದುವರಿದ ಹುಲಿ ದಾಳಿಯಿಂದಾಗಿ ಹಾಲು ಕರೆಯುವ ಹಸು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಹಾಡಹಗಲೇ ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ಬಾಡಗ ಬಾಣಂಗಾಲ ಗ್ರಾಮದ ಕಾಫಿ ಬೆಳೆಗಾರ ಸಿ.ಟಿ. ಪೊನ್ನಪ್ಪ ಎಂಬವರ ಕಾಫಿ ತೋಟದಲ್ಲಿ ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದ ಘಟನೆ ನಡೆದಿತ್ತು. ಹಸುವಿನ ಕಳೇಬರವನ್ನು ಎಳೆದುಕೊಂಡು ಹೋಗಿತ್ತು. ಗ್ರಾಮದಲ್ಲಿ ದೊಡ್ಡ ಗಾತ್ರದ ಹುಲಿಯು ಸಂಚರಿಸುತ್ತಿರುವ ದೃಶ್ಯವು ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇದೀಗ ಮತ್ತೆ ಬುಧವಾರದಂದು ಬೆಳಿಗ್ಗೆ ಬಾಡಗ ಬಾಣಂಗಾಲ ಗ್ರಾಮದ ಮಠ ನಿವಾಸಿ ಜಾನ್ ಫಿಲೋಮಿನಾ ಎಂಬವರಿಗೆ ಸೇರಿದ ಉತ್ತಮ ತಳಿಯ ಬೆಲೆಬಾಳುವ ಹಾಲು ಕರೆಯುವ ಹಸುವನ್ನು ಅವರ ಮನೆಯ ಬಳಿಯ ಗದ್ದೆಯಲ್ಲಿ ಮೇಯಲು ಕಟ್ಟಿದ್ದರು. ಮಧ್ಯಾಹ್ನದ ಸಮಯದಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಬಳಿ ತೆರಳಿದಾಗ ಸಾವನ್ನಪ್ಪಿರುವುದು ಕಂಡು ಬಂದಿದೆ. ಹಸುವಿನ ಬಳಿ ನೋಡಿದಾಗ ಹಸುವಿನ ಕುತ್ತಿಗೆಯ ಬಳಿ ಗಂಭೀರ ಗಾಯವಾಗಿರುವ ಗುರುತು ಪತ್ತೆಯಾಗಿದೆ. ಹುಲಿ ದಾಳಿ ನಡೆಸಿ ಹಸುವನ್ನು ಸಾಯಿಸಿದೆ ಎಂದು ಹಸುವಿನ ಮಾಲೀಕರು ತಿಳಿಸಿದ್ದಾರೆ.
ಜಾನ್ ಫಿಲೋಮಿನಾ ಅವರು ಬೆಲೆ ಬಾಳುವ ಉತ್ತಮ ತಳಿಯ ಹಸುವನ್ನು ಸಾಕಿ ಅದರ ಹಾಲನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಸೇರಿದ ಹಸು ಕರು ಹಾಕಿ ಕೇವಲ ೧೫ ದಿನಗಳಷ್ಟೇ ಕಳೆದಿದೆ. ಹಸುವನ್ನು ಹುಲಿ ಕೊಂದು ಹಾಕಿದೆ. ಇದರಿಂದಾಗಿ ಹಸುವಿನ ಮಾಲೀಕರಿಗೆ ನಷ್ಟ ಸಂಭವಿಸಿದೆ. ಈ ಭಾಗದಲ್ಲಿ ಕಳೆದ ತಿಂಗಳು ಪ್ರವೀಣ ಎಂಬವರಿಗೆ ಸೇರಿದ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದ ಘಟನೆ ನಡೆದಿತ್ತು. ಕೂಡಲೇ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಡಿ. ಮುತ್ತಪ್ಪ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಮಾಹಿತಿ ನೀಡಿದ ಉಪವಲಯ ಅರಣ್ಯ ಅಧಿಕಾರಿ ಶಶಿ . ಅವರು ಈ ಭಾಗದಲ್ಲಿ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅದರ ಚಲನವಲನ ಕಂಡುಹಿಡಿಯಲು ಕ್ಯಾಮರಾಗಳನ್ನು ಇಲಾಖೆ ವತಿಯಿಂದ ಅಳವಡಿಸಲಾಗುವುದೆಂದು ತಿಳಿಸಿದರು. ಈಗಾಗಲೇ ಮೇಲಾಧಿಕಾರಿಗಳ ಬಳಿ ಚರ್ಚಿಸಿ, ಉಪಟಳ ನೀಡುತ್ತಿರುವ ಹುಲಿ ಸೆರೆ ಹಿಡಿಯಲು ಮೇಲಾಧಿಕಾರಿಗಳು ಸರಕಾರಕ್ಕೆ ಪತ್ರ ರವಾನಿಸಿದ್ದಾರೆ ಎಂದು ತಿಳಿಸಿದರು. ಹುಲಿಯ ಚಲನವಲನ ಕಂಡು ಹಿಡಿಯಲು ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆರ್. ಆರ್. ಟಿ. ಆನೆ ಕಾರ್ಯಪಡೆಯ ಸಿಬ್ಬಂದಿಗಳು ರಾತ್ರಿ ಗಸ್ತಿನಲ್ಲಿ ತಿರುಗಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಾಡಗ ಬಾಣಂಗಾಲ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರು ಇದೀಗ ಹುಲಿಯಿಂದಾಗಿ ಆತಂಕಕ್ಕೆ ಸಿಲುಕಿದ್ದಾರೆ. ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.