ಶನಿವಾರಸಂತೆ, ಮೇ ೬ : ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡೇನಹಳ್ಳಿ ಗ್ರಾಮದ ರಸ್ತೆಯಲ್ಲಿ ಬೈಕ್ ಗೆ ಅಪರಿಚಿತ ಕಾರೊಂದು ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ಯುವಕ ಚಂದನ್ (೨೫) ಗಂಭೀರವಾಗಿ ಗಾಯಗೊಂಡಿದ್ದು ಹಾಸನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಚೌಡೇನಹಳ್ಳಿ ಗ್ರಾಮದ ಕೃಷಿಕ ಸುರೇಶ್ ಅವರ ಪುತ್ರ ಚಂದನ್ ತನ್ನ ಸ್ನೇಹಿತ ನಿಶ್ಚಿತ್ (೨೨) ಜೊತೆ ಚೌಡೇನಹಳ್ಳಿಯಿಂದ ಶನಿವಾರಸಂತೆ ಕಡೆ ಬೈಕ್ನಲ್ಲಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಶನಿವಾರಸಂತೆ ಕಡೆಯಿಂದ ಬರುತ್ತಿದ್ದ ಅಪರಿಚಿತ ಕಾರು ಡಿಕ್ಕಿಪಡಿಸಿದ ತಕ್ಷಣ ನಿಯಂತ್ರಣ ತಪ್ಪಿದ ಬೈಕ್ ನಿಂದ ರಸ್ತೆಗೆ ಬಿದ್ದ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ಚಂದನ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಿಂಬದಿ ಸವಾರ ನಿಶ್ಚಿತ್ (೨೨) ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ನಡೆದ ತಕ್ಷಣ ಕಾರು ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಮೃತ ಚಂದನ್ನ ಸಹೋದರ ಸಂಬAಧಿ ಮೋಹನ್ ದೂರು ನೀಡಿದ್ದು; ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಎಚ್.ವೈ. ಚಂದ್ರ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಚಂದನ್ನ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರ ವಶಕೊಪ್ಪಿಸಲಾಗಿದೆ.