ಚೆಯ್ಯಂಡಾಣೆ, ಮೇ ೫: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಸ್ಟೂಡೆಂಟ್ ಫೇಡರೇಷನ್ (ಎಸ್.ಎಸ್.ಎಫ್.) ಇದರ ೫೩ನೇ ಸಂಭ್ರಮಾಚರಣೆಯ ಅಂಗವಾಗಿ ವೀರಾಜಪೇಟೆಯ ಸಮನ್ವಯ ವಿದ್ಯಾಸಂಸ್ಥೆ ಅನ್ವಾರುಲ್ ಹುದಾ ಕ್ಯಾಂಪಸ್‌ನಲ್ಲಿ ಸ್ಥಾಪಕ ದಿನಾಚರಣೆ ನಡೆಸಲಾಯಿತು. ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಕಮರುದ್ದೀನ್ ಅನ್ವಾರಿ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿ ೧೯೭೩ ಏಪ್ರಿಲ್ ೨೯ ರಂದು ಕೇರಳದ ಮಲಪ್ಪುರಂನಲ್ಲಿ ಉದಯಿಸಿದ ದೇಶದ ಅತೀದೊಡ್ಡ ವಿದ್ಯಾರ್ಥಿ ಸಂಘಟನೆ ಯಾಗಿರುವ ಎಸ್.ಎಸ್.ಎಫ್. ನಾಡಿಗೂ, ಸಮಾಜಕ್ಕೂ ಉಪಯುಕ್ತ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಮಾಜವು ಎದುರಿಸುವ ದುರಂತವಾದ ಮಾದಕ ವ್ಯಸನದ ಕುರಿತು ಮಾತನಾಡಿ, ಇದರ ವಿರುದ್ಧ ಜನಜಾಗೃತಿ ಅಭಿಯಾನ ನಡೆಸುತ್ತಾ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಎಸ್.ಎಸ್. ಎಫ್. ಕಾರ್ಯಾಚರಿಸುತ್ತಿದೆ. ರಾಜ್ಯ ಸಮಿತಿಯು ರಾಜ್ಯದ ಒಂದು ಲಕ್ಷದಷ್ಟು ಕಾರ್ಯಕರ್ತರಿಗೆ ಮಾದಕ ವ್ಯಸನದ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ ಎಂದು ಮಾಹಿತಿ ಯಿತ್ತರು. ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್.ಎಸ್.ಎಫ್. ಸಂಘಟನೆ ನಡೆದು ಬಂದ ಹಾದಿಯನ್ನು ಚುಟುಕಾಗಿ ವಿವರಿಸಿದರು. ಜಿಲ್ಲಾ ವೆಫಿ ಕಾರ್ಯದರ್ಶಿ ಸಾಬಿತ್ ಮಾಸ್ಟರ್ ಮಾಲ್ದಾರೆ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು. ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭ ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ರಶೀದ್ ಸಅದಿ, ಪ್ರಾಧ್ಯಾಪಕರಾದ ಇಸ್ಮಾಯಿಲ್ ಸಖಾಫಿ, ಅಬ್ದುಲ್ ರಹ್ಮಾನ್ ಅಹ್ಸನಿ, ಝೈನುದ್ದೀನ ಅಝ್ಹರಿ, ಜಿಲ್ಲಾ ನಾಯಕರಾದ ಜುನೈದ್ ಅನ್ವಾರಿ, ಜಲೀಲ್ ಅಮೀನಿ, ಹಾಫಿಝ್ ತ್ವಾಹಾ ತಮೀಂ ಲತೀಫಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಫೀಲ್ ಸ್ವಾಗತಿಸಿ, ಇರ್ಫಾನ್ ವಂದಿಸಿದರು.