ಕುಶಾಲನಗರ, ಮೇ ೫: ಲೋಕಸೇವಾ ಆಯೋಗದ ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಅನುಕೂಲವಾಗುವಂತೆ ಬೆಂಗಳೂರಿನ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವಾಸವಿ ಅಕಾಡೆಮಿ ಮಧ್ಯಮ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಂಗಳೂರು ನಗರದ ವಿಜಯನಗರ ಬಡಾವಣೆಯ ಚಂದ್ರಾ ಲೇಔಟ್ ನಲ್ಲಿರುವ ವಾಸವಿ ಅಕಾಡೆಮಿ ಈಗಾಗಲೇ ಹಲವು ತಂಡಗಳಿಗೆ ಉತ್ತಮ ಶಿಕ್ಷಣ ನೀಡಿದೆ. ಇದೀಗ ೨೦೨೬ರಲ್ಲಿ ನಡೆಯುವ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಯಾವುದೇ ಪದವೀಧರರು ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ೨೦೨೬ರಲ್ಲಿ ಪರೀಕ್ಷೆ ಬರೆಯುವ ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತಿದ್ದು, ಎಲ್ಲಾ ತರಗತಿಗಳು ಸಂಪೂರ್ಣ ಉಚಿತವಾಗಿರುತ್ತದೆ. ಯಾವುದೇ ಸಮುದಾಯದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ನಿಮಯಮಾನುಸಾರ ಪ್ರವೇಶವನ್ನು ಪಡೆಯಲು ಅವಕಾಶವಿದೆ. ಪ್ರವೇಶಾಸಕ್ತ ವಿದ್ಯಾರ್ಥಿಗಳು ವಾಸವಿ ಅಕಾಡೆಮಿಯು ನಡೆಸುವ ಪ್ರವೇಶ ಮತ್ತು ಮೌಖಿಕ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಬೇಕಿದೆ.

ತರಬೇತಿಯ ಅವಧಿ ೬ ತಿಂಗಳಾಗಿದ್ದು, ಅರ್ಜಿ ಸಲ್ಲಿಸಲು ೨೦೨೫ ಜು.೧೫ ಕೊನೆಯ ದಿನವಾಗಿದೆ. ಪ್ರವೇಶ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ ೨೦೨೫ ಜು.೨೦ ರಂದು ನಡೆಯಲಿದೆ. ತರಗತಿಗಳು ಆ.೧ರಿಂದ ಆರಂಭಗೊಳ್ಳಲಿದ್ದು, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ವಾಸವಿ ಅಕಾಡೆಮಿ ನಡೆಸುವ ತರಗತಿಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ ೯೪೪೮೦೭೪೫೨೮, ೯೬೬೩೯೦೦೪೩೯, ೯೯೧೬೧೧೬೬೧೫, ೯೯೦೧೭೯೪೦೩೫ ನ್ನು ಸಂಪರ್ಕಿಸಬಹುದಾಗಿದೆ. ಯಾವುದೇ ಸಮುದಾಯದ ಮಧ್ಯಮ ಹಾಗೂ ಬಡ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ತರಬೇತಿ ಪಡೆಯಬಹುದಾಗಿದೆ ಎಂದು ಬಿ.ಆರ್.ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಸವಿ ಅಕಾಡೆಮಿ ಒಂದು ಸೇವಾ ಸಂಸ್ಥೆಯಾಗಿದೆ. ಕಳೆದ ೧೧೬ ವರ್ಷಗಳಿಂದ ಸಮಾಜದ ಸರ್ವಾಂಗಿಣ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ ಸಾವಿರಾರು ವಿದ್ಯಾರ್ಥಿಗಳ ಕುಟುಂಬದ ಉನ್ನತಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.