ಗೋಣಿಕೊಪ್ಪಲು, ಮೇ.೫: ಕಾಡು ಮಕ್ಕಳ ಕ್ರಿಕೆಟ್ ಹಬ್ಬದಲ್ಲಿ ಕರ್ನಾಟಕದ ಡಿಕೆಡಿ ಖ್ಯಾತಿಯ ರುದ್ರಮಾಸ್ಟರ್ ಹಾಗೂ ಮಿಮಿಕ್ರಿ ಶ್ಯಾಮ್ ಆಗಮಿಸುವ ಮೂಲಕ ಫೈನಲ್ ಪಂದ್ಯಾವಳಿಗೆ ತಾರಾ ಮೆರುಗು ನೀಡಿದರು. ತಿತಿಮತಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜೇನುಕುರುಬರ ಯುವ ಸಮಾಜ ಹಮ್ಮಿಕೊಂಡಿದ್ದ ೬ನೇ ವರ್ಷದ ಜೇನುಕುರುಬ ಮನೆತನದ ಗೆಜ್ಜೆ ಮನೆಯ ಕ್ರಿಕೆಟ್ ಕಪ್ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕಾಡು ಮಕ್ಕಳೊಂದಿಗೆ ಮುಕ್ತವಾಗಿ ಬೆರೆತರು.

ಅಂತಿಮ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಜಿಕೆ ಫ್ರೆಂಡ್ಸ್ ಕಾಯಿಮನೆ ಹಾಗೂ ಸಿವೈಸಿ ಕುಟ್ಟ ನಡುವೆ ನಡೆಯಿತು. ಈ ಪಂದ್ಯಾವಳಿಯನ್ನು ರುದ್ರ ಮಾಸ್ಟರ್ ಹಾಗೂ ಶ್ಯಾಮ್ ಉದ್ಘಾಟಿಸಿದರು. ಅಂತಿಮ ಪಂದ್ಯದಲ್ಲಿ ಜಿಕೆ ಫ್ರೆಂಡ್ಸ್ ಕಾಯಿಮನೆ ೬ನೇ ವರ್ಷದ ಜೇನುಕರುಬರ ಗೆಜ್ಜೆ ಮನೆಯ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಸಿವೈಸಿ ಕುಟ್ಟ ದ್ವಿತೀಯ ಸ್ಥಾನ ಪಡೆಯುವ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು. ಸಿವೈಸಿ ಕುಟ್ಟ (ಎ) ತಂಡವು ೩ನೇ ಸ್ಥಾನ ಪಡೆದರೆ ೪ನೇ ಸ್ಥಾನವು ಕಾರೆಕಂಡಿಯ ವಿನ್ಸಿ ಕ್ರಿಕೆರ‍್ಸ್ ಪಾಲಾಯಿತು.ಸಮಾರೋಪ ಸಮಾರಂಭವು ಜೇನುಕುರುಬ ಯುವ ಸಮಾಜದ ಅಧ್ಯಕ್ಷ ಜೆ.ವಿ.ಸತೀಶ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಜೇನುಕುರುಬ ಅಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಟಿ.ರಾಜಪ್ಪ, ಕಾರ್ಯದರ್ಶಿ ಜೆ.ಟಿ.ಚಂದ್ರು, ಗಣ್ಯರಾದ ಬಸವಣ್ಣ, ಶಿವಣ್ಣ, ಯುವ ಸಮಾಜದ ಸದಸ್ಯರುಗಳಾದ ಅಯ್ಯಪ್ಪ, ಮನು, ಜೆ.ಡಿ.ನಾಗೇಂದ್ರ, ಶಿವು, ಅವಿನಾಶ್, ಶೇಖರ್, ತಿತಿಮತಿ ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ಮಣಿಕುಂಞ, ಉದ್ಯಮಿಗಳಾದ ಮಂಜೇಶ್, ವೇಣುಗೋಪಾಲ್, ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಅಪ್ರೋಸ್, ಸಮಾಜ ಸೇವಕ ಮುಸ್ತಫಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸುತ್ತ ಮುತ್ತಲಿನ ಆದಿವಾಸಿ ಸಮುದಾಯ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಸಮಾಗಮಗೊಂಡಿದ್ದರು.

(ಮೊದಲ ಪುಟದಿಂದ) ಕಾಡು ಮಕ್ಕಳನ್ನು ಉದ್ದೇಶಿಸಿ ಡಿಕೆಡಿ ಖ್ಯಾತಿಯ ರುದ್ರಮಾಸ್ಟರ್ ಮಾತನಾಡಿ ಸದಾ ಒತ್ತಡದಲ್ಲಿದ್ದರೂ ಕಾಡಿನ ಮಕ್ಕಳ ಕ್ರೀಡಾಕೂಟಕ್ಕೆ ಆಗಮಿಸಿದ್ದೇನೆ. ಆದಿವಾಸಿಗಳಲ್ಲಿರುವ ಪ್ರೀತಿಯನ್ನು ನಾವು ಎಲ್ಲಿಯೂ ಪಡೆಯಲು ಸಾಧ್ಯವಿಲ್ಲ.

ಸಾಧನೆ ಮಾಡಬೇಕು

ಕಾಡುಮಕ್ಕಳಲ್ಲಿ ವಿಶೇಷವಾದ ಪ್ರತಿಭೆಗಳು ಅಡಗಿರುತ್ತವೆ. ಅವುಗಳಿಗೆ ಬೇಕಾದ ವೇದಿಕೆಗಳು ಸೃಷ್ಟಿಯಾಗ ಬೇಕು. ಕಾಡುಮಕ್ಕಳು ಸಾಧನೆ ಮಾಡುವಂತಾಗಬೇಕು. ಸದಾ ಕಾಡಿನಲ್ಲಿ ವಾಸಮಾಡುವ ಆದಿವಾಸಿಗಳು ಕ್ರೀಡೆಯ ಮೂಲಕ ಒಂದೆಡೆ ಸೇರಿ ಜನಾಂಗದ ಒಗ್ಗಟ್ಟನ್ನು ಗಟ್ಟಿಗೊಳಿಸುತ್ತಿರುವುದು ಶ್ಲಾಘನೀಯ,ಇಂದು ಪರಿಸರ ಉಳಿದಿದ್ದರೆ ಇದು ಕಾಡುಮಕ್ಕಳ ಕೊಡುಗೆಯಾಗಿದೆ. ಪರಿಸರವನ್ನು ಮತ್ತಷ್ಟು ಉಳಿಸುವ ಪ್ರಯತ್ನ ಆದಿವಾಸಿಗಳಿಂದ ನಡೆಯಲಿ ಎಂದರು.

ಆದಿವಾಸಿಗಳನ್ನು ಬೆಳೆಸಬೇಕು

ಮಿಮಿಕ್ರಿ ಶ್ಯಾಮ್ ಮಾತನಾಡಿ ಕಾಡುಮಕ್ಕಳು ಮುಗ್ಧ ಜೀವಗಳು, ಆದಿವಾಸಿಗಳನ್ನು ಬೆಳೆಸುವ ಜವಾಬ್ದಾರಿ ಈ ನಾಡಿನ ಮೇಲಿದೆ. ಪರಿಸರದ ಉಳಿವಿಗಾಗಿ ಆದಿವಾಸಿಗಳು ತಮ್ಮದೆ ಕೊಡುಗೆ ನೀಡಿದ್ದಾರೆ. ವಾರ್ಷಿಕವಾಗಿ ನಡೆಸುವ ಕ್ರೀಡಾಕೂಟಕ್ಕೆ ನಾಡಿನ ಜನತೆಯ ಸಹಕಾರ ಅಗತ್ಯವಾಗಿ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸಹಕಾರವು ಕಾಡಿನ ಮಕ್ಕಳಿಗೆ ಸದಾ ಇರುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಸಂಕೋಚ ಬೀಡಬೇಕು

ಜೇನುಕರುಬರ ಯುವ ಸಮಾಜದ ಮುಖಂಡ ಅಯ್ಯಪ್ಪ ಮಾತನಾಡಿ,ಕಾಡಿನ ಮಕ್ಕಳನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಫಲ ನೀಡಿದೆ. ೫೪ ಪುರುಷ ತಂಡಗಳು ಹಾಗೂ ೯ ಮಹಿಳಾ ತಂಡಗಳು ಕ್ರಿಕೆಟ್ ಹಬ್ಬದಲ್ಲಿ ಭಾಗವಹಿಸಿವೆ. ವರ್ಷದಿಂದ ವರ್ಷಕ್ಕೆ ಸಮುದಾಯ ಬಾಂಧವರಲ್ಲಿ ಒಗ್ಗಟ್ಟು ಹೆಚ್ಚಾಗುತ್ತಿದೆ. ಮೊದಲ ಬಾರಿಗೆ ಮಹಿಳೆಯರಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳುವ ಮೂಲಕ ಯಶಸ್ಸು ಸಾಧಿಸಿದ್ದೇವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆ ಬೇರೆ ಜನಾಂಗವು ಕ್ರೀಡೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡುತ್ತಿದೆ. ಆ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಮಹಿಳೆಯರಿಗೆ ಕ್ರಿಕೆಟನ್ನು ಆಯೋಜಿಸಿದ್ದೇವೆ. ಆದಿವಾಸಿಗಳು ಕೀಳರಿಮೆ ಹಾಗೂ ಸಂಕೋಚವನ್ನು ಬಿಟ್ಟು ಹೊರಬರಬೇಕು. ಕ್ರೀಡಾ ಮನೋಭಾವ ಎಲ್ಲರು ಬೆಳೆಸಿಕೊಳ್ಳಬೇಕು.ಆದಿವಾಸಿಗಳಲ್ಲಿ ತಮ್ಮದೆ ಆದ ಕಲೆ ಸಂಸ್ಕೃತಿ ಅಡಗಿದೆ. ವಾರ್ಷಿಕವಾಗಿ ಎಲ್ಲರು ಕ್ರೀಡೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ಕರೆ ನೀಡಿದರು.

ಮನೆ ಹೆಸರಲ್ಲಿ ಕ್ರೀಡೋತ್ಸವ

ಅಧ್ಯಕ್ಷತೆ ವಹಿಸಿದ್ದ ಜೇನುಕುರುಬ ಸಮಾಜದ ಅಧ್ಯಕ್ಷ ಜೆ.ವಿ.ಸತೀಶ್ ಮಾತನಾಡಿ ಜೇನುಕುರುಬ ಸಮುದಾಯದಲ್ಲೂ ಮನೆತನವಿದ್ದು ವರ್ಷಕ್ಕೊಮ್ಮೆ ಮನೆತನದ ಹೆಸರಿನಲ್ಲಿ ಕ್ರೀಡೋತ್ಸವವನ್ನು ನಡೆಸುತ್ತ ಬರುತ್ತಿದ್ದೇವೆ. ಇದರಿಂದ ಮರೆಯಾಗಿರುವ ಮನೆತನವು ಬೆಳಕಿಗೆ ಬರುತ್ತಿದೆ. ಕಾಡು ಮಕ್ಕಳ ಕ್ರೀಡೋತ್ಸವಕ್ಕೆ ದಾನಿಗಳು ನೀಡುವ ಸಹಕಾರ ಅವಿಸ್ಮರಣೀಯ. ಸರ್ಕಾರ ಆದಿವಾಸಿಗಳ ಕ್ರೀಡಾಕೂಟಕ್ಕೆ ಅನುದಾನವನ್ನು ನೀಡುವ ಪ್ರಯತ್ನ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವಿಶೇಷ ಆಸಕ್ತಿ ವಹಿಸುವಂತೆ ಮನವಿ ಮಾಡಿದರು.

-ಹೆಚ್.ಕೆ. ಜಗದೀಶ್