ಗೋಣಿಕೊಪ್ಪಲು, ಮೇ ೫: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೨೯ ದಿನ ೭ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಕಾಡ್ಯಮಾಡ ಹಾಗೂ ಮಲಚೀರ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಮಲಚೀರ ತಂಡವು ನಿಗದಿತ ಓವರ್ನಲ್ಲಿ ೯ ವಿಕೆಟ್ ಕಳೆದುಕೊಂಡು ೪೪ ರನ್ ಗಳಿಸಿತು. ನಿಗದಿತ ರನ್ ಅನ್ನು ಭೇದಿಸುವ ಪ್ರಯತ್ನ ಮಾಡಿದ ಕಾಡ್ಯಮಾಡ ೩ ವಿಕೆಟ್ ಕಳೆದುಕೊಂಡು ೪೫ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.
ಎರಡನೇ ಪಂದ್ಯವು ಕೋಣೇರಿರ ಹಾಗೂ ಕೈಪಟ್ಟಿರ ತಂಡದ ನಡುವೆ ನಡೆಯಿತು. ಕೋಣೇರಿರ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿ ನಿಗದಿತ ಓವರ್ ನಲ್ಲಿ ೩ ವಿಕೆಟ್ ಕಳೆದುಕೊಂಡು ೭೧ ರನ್ ಗಳಿಸಿ, ಎದುರಾಳಿ ತಂಡಕ್ಕೆ ಸವಾಲು ನೀಡಿತು. ಉತ್ತಮ ಬ್ಯಾಟಿಂಗ್ ಆರಂಭಿಸಿದ ಕೈಪಟ್ಟಿರ ತಂಡವು ನಿಗದಿತ ಓವರ್ ನಲ್ಲಿ ೨ ವಿಕೆಟ್ ಕಳೆದುಕೊಂಡು ೭೨ ರನ್ ಗಳಿಸುವ ಮೂಲಕ ಕೋಣೇರಿರ ತಂಡವನ್ನು ಸೋಲಿಸಿ, ಗೆಲುವಿನ ನಗೆ ಬೀರಿತು.
ಮೂರನೇ ಪಂದ್ಯವು ಚೌರೀರ ತಂಡ ಹಾಗೂ ಹಂಚೆಟ್ಟಿರ ತಂಡದ ನಡುವೆ ನಡೆಯಿತು. ಚೌರೀರ ತಂಡವು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ ಓವರ್ನಲ್ಲಿ ೫ ವಿಕೆಟ್ ಕಳೆದುಕೊಂಡು ೨೬ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ನಿಗದಿತ ರನ್ ಅನ್ನು ಬೆನ್ನತ್ತಿದ ಹಂಚೆಟ್ಟಿರ ತಂಡವು ಇನ್ನೂ ೨ ಓವರ್ ಬಾಕಿ ಇರುವಂತೆಯೇ ೩೧ ಗಳಿಸಿ ಗೆಲುವು ಸಾಧಿಸಿತು.
ನಾಲ್ಕನೇ ಪಂದ್ಯವು ಕೀಕಣಮಾಡ ಹಾಗೂ ಪಾರುವಂಗಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ತಂಡವು ನಿಗದಿತ ಓವರ್ನಲ್ಲಿ ೪ ವಿಕೆಟ್ ಕಳೆದುಕೊಂಡು ೩೭ ರನ್ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ನಿಗದಿತ ರನ್ ಬೇಧಿಸಿದ ಪಾರುವಂಗಡ ತಂಡವು ೨ ಓವರ್ ಬಾಕಿ ಇರುವಂತೆಯೇ ೧ ವಿಕೆಟ್ ಕಳೆದುಕೊಂಡು ೩೮ ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.
ಐದನೇ ಪಂದ್ಯವು ಚಾರಿಮಂಡ ತಂಡ ಹಾಗೂ ಬೊಪ್ಪಂಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಚಾರಿಮಂಡ ತಂಡವು ನಿಗದಿತ ಓವರ್ ನಲ್ಲಿ ೮ ವಿಕೆಟ್ ಕಳೆದುಕೊಂಡು ೨೬ ರನ್ ಗಳಿಸಿ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ನೀಡಿತು. ಈ ರನ್ ಬೇಧಿಸುವ ಪ್ರಯತ್ನ ಮಾಡಿದ ಬೊಪ್ಪಂಡ ತಂಡವು ಕೇವಲ ೩ ಓವರ್ನಲ್ಲಿ ೩ ವಿಕೆಟ್ ಕಳೆದುಕೊಂಡು ೨೮ ರನ್ ಸಂಪಾದಿಸಿ ಗೆಲುವು ಸಾಧಿಸಿತು.
ಆರನೇ ಪಂದ್ಯವು ಅಡ್ಡೇಂಗಡ ತಂಡ ಹಾಗೂ ಆದೇಂಗಡ ತಂಡದ ನಡುವೆ ನಡೆಯಿತು. ಬ್ಯಾಟಿಂಗ್ ಆಯ್ದುಕೊಂಡ ಅಡ್ಡೇಂಗಡ ತಂಡ ನಿಗದಿತ ಓವರ್ನಲ್ಲಿ ೩ ವಿಕೆಟ್ ಕಳೆದುಕೊಂಡು ೫೨ ರನ್ ಸಂಪಾದಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಆದೇಂಗಡ ತಂಡವು ಬ್ಯಾಟಿಂಗ್ ಆರಂಭಿಸಿ ೪ ಓವರ್ನಲ್ಲಿ ೨ ವಿಕೆಟ್ ಕಳೆದುಕೊಂಡು ೫೩ ರನ್ ಗಳಿಸುವ ಮೂಲಕ ಅಡ್ಡೇಂಗಡ ತಂಡವನ್ನು ೮ ವಿಕೆಟ್ ಗಳ ಅಂತರದಲ್ಲಿ ಸೋಲಿಸಿ ಮುಂದಿನ ಹಂತಕ್ಕೆ ಮುನ್ನಡೆಯಿತು.
ಏಳನೇ ಪಂದ್ಯವು ಚೆಪ್ಪುಡೀರ ಹಾಗೂ ಕುಪ್ಪಣಮಾಡ ತಂಡದ ನಡುವೆ ನಡೆಯಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಕುಪ್ಪಣಮಾಡ ತಂಡವು ನಿಗದಿತ ಓವರ್ನಲ್ಲಿ ೭ ವಿಕೆಟ್ ಕಳೆದುಕೊಂಡು ೬೬ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ನಿಗದಿತ ರನ್ ಅನ್ನು ಭೇದಿಸುವ ಪ್ರಯತ್ನ ಮಾಡಿದ ಚೆಪ್ಪುಡೀರ ತಂಡವು ೫.೫ ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ೩೩ ರನ್ ಸಂಪಾದಿಸಿ ಸೋಲನ್ನು ಅನುಭವಿಸಿತು. - ಹೆಚ್.ಕೆ. ಜಗದೀಶ್