ಶನಿವಾರಸಂತೆ, ಮೇ. ೫: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ರೂವಾರಿ ಶಿಕ್ಷಕ ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ ಸುಂದರ ಮೂರ್ತಿಗಳನ್ನಾಗಿಸಿ ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಸ್.ಪಿ. ರಾಜ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಭಾರತಿ ವಿದ್ಯಾಸಂಸ್ಥೆಯ ನಿಡ್ತ ಬಸಪ್ಪ ಸಭಾಂಗಣದಲ್ಲಿ ಸಂಸ್ಥೆಯ ೨೦೦೨-೦೫ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿದೆಸೆಯಲ್ಲಿ ತಪ್ಪು ಮಾಡಿದ ವಿದ್ಯಾರ್ಥಿಗಳು ಶಿಕ್ಷಕರ ದಂಡನೆಗೆ ಒಳಗಾಗುವುದು ಸಹಜ. ಅದನ್ನೆಲ್ಲಾ ಮರೆತ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸಿ ಇಂದು ಗುರುವಂದನಾ ಸಲ್ಲಿಸುತ್ತಿರುವ ಪವಿತ್ರ ಮನೋಭಾವ ಶಿಕ್ಷಕರಲ್ಲಿ ಧನ್ಯತಾ ಭಾವ ಮೂಡಿಸಿದೆ ಎಂದರು.

ಮುಖ್ಯ ಅತಿಥಿ ನಿವೃತ್ತ ಮುಖ್ಯಶಿಕ್ಷಕ ಜಿ.ಬಿ. ನಾಗಪ್ಪ ಮಾತನಾಡಿ, ಗುರುಗಳೆಂಬ ಪವಿತ್ರ ಭಾವನೆಯಿಂದ ಸನ್ಮಾನಿಸಿ ಗುರುವಂದನೆ ಸಲ್ಲಿಸುವ ಹಳೆಯ ವಿದ್ಯಾರ್ಥಿಗಳ ಸಂಪ್ರದಾಯ ಉತ್ತಮವಾದುದು. ಮನುಷ್ಯರಾಗಿ ಜನಿಸಿದ್ದಕ್ಕೆ ದೇವರ ಋಣ ತೀರಿಸಬೇಕು. ಆದರೆ, ತಂದೆ-ತಾಯಿ ಹಾಗೂ ಗುರು ಋಣ ತೀರಿಸಲು ಸಾಧ್ಯವಿಲ್ಲವಾದರೂ ಮೂವರನ್ನು ಸದಾ ಗೌರವಿಸಬೇಕು ಎಂದು ಕರೆ ನೀಡಿದರು.ಸನ್ಮಾನಿತರಾಗಿ ಗುರುವಂದನೆ ಸ್ವೀಕರಿಸಿದ ಶಿಕ್ಷಕರಾದ ಎಸ್.ಪಿ. ರಾಜ್, ಜಿ.ಬಿ. ನಾಗಪ್ಪ, ಕೆ.ಎಂ. ನಾಗರಾಜ್, ಪಿ. ನರಸಿಂಹಮೂರ್ತಿ, ಪುಟ್ಟಸ್ವಾಮಿ, ಸಿ.ಆರ್. ಗೋಪಾಲ್, ಡಿ. ಶ್ರೀನಿವಾಸ್ ಮೂರ್ತಿ, ಶ.ಗ. ನಯನತಾರ, ದಾಕ್ಷಾಯಿಣಿ, ಮಮತಾ, ಹೆಚ್.ಎನ್. ಮಂಗಳಾ, ಎಸ್.ಈ. ಧರ್ಮಪ್ಪ ತಮ್ಮ ಅನುಭವಗಳ ಕುರಿತು ಮಾತನಾಡಿ, ಹಿತನುಡಿಗಳನ್ನಾಡಿದರು.

ಹಳೆಯ ವಿದ್ಯಾರ್ಥಿಗಳಾದ ಜಗದೀಶ್ ಪಟೇಲ್, ಷಂಶುದ್ದೀನ್, ಉದಯ್, ಪ್ರೀತಿ, ಅನಿಸಿಕೆ ಹಂಚಿಕೊAಡರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪಿ. ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ತಾರತಮ್ಯವಿಲ್ಲದೆ ಸಮಾನತೆಯ ಭಾವದಿಂದ ಬೆಳೆದು ಬಂದ ವಿದ್ಯಾರ್ಥಿಗಳು ಪ್ರಸ್ತುತ ಸಮಾಜದಲ್ಲಿ ಉತ್ತಮ ನಾಗರಿಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯಕುಮಾರ್ ಸ್ವಾಗತಿಸಿದರು. ಲೀಲಾವತಿ ನಿರೂಪಿಸಿದರು. ತೀರ್ಥಾನಂದ್ ವಂದಿಸಿದರು. ಮನೋರಂಜನಾ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಂಜಿಸಿದರು. ವಿದ್ಯಾಸಂಸ್ಥೆಯ ಕೊಠಡಿಗಳಿಗೆ ಹಾಗೂ ಹೊರಗಿನ ಗೋಡೆಗಳಿಗೆ ಸುಣ್ಣ-ಬಣ್ಣ ಮಾಡಿಸುವ ಮೂಲಕ ಹಳೇ ವಿದ್ಯಾರ್ಥಿಗಳು ಕಲಿತ ಶಾಲೆಗೆ ಕೊಡುಗೆ ಸಲ್ಲಿಸಿದರು.