ಕೊಡ್ಲಿಪೇಟೆ, ಮೇ ೫: ಮಡಿಕೇರಿ ತಾಲೂಕಿನ ಮದೆನಾಡು ಬಳಿಯಿರುವ ಓಣಿಪುರ ಮಠದಿಂದ ಕೊಡ್ಲಿಪೇಟೆಯ ಕಲ್ಲುಮಠಕ್ಕೆ ಪೀಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ಧಾರ್ಮಿಕ, ಅಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ೫೦ ವರ್ಷಗಳನ್ನು ಪೂರೈಸಿದ ಕಲ್ಲುಮಠದ ಶ್ರೀಗಳಾದ ಮಹಾಂತ ಸ್ವಾಮೀಜಿಗಳ ಪೀಠಾರೋಹಣದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಸ್ವಾಮೀಜಿಗಳು ಆಗಮಿಸುವ ಮೂಲಕ, ಮಠದ ಶಾಲೆಯಲ್ಲಿ ವಿರಕ್ತ ಸಂತರ ಸಮಾಗಮಕ್ಕೆ ಸಾಕ್ಷಿಯಾದರು.
ಕೊಡಗನ್ನಾಳಿದ ಹಾಲೇರಿ ರಾಜರ ಕಾಲದಲ್ಲಿ ಬಳುವಳಿಯಾಗಿ ಬಂದ ದಟ್ಟಡವಿಯ ಕಾಡಿನಲ್ಲಿ ಸುಂದರ ಮಠವಿದೆ. ನಿತ್ಯ ದಾಸೋಹದೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಜನಮನ್ನಣೆ ಗಳಿಸಿರುವ ಕಲ್ಲುಮಠವು ಈ ಭಾಗದ ಆಸ್ತಿಕ ಮಂದಿಗೆ ಮಾರ್ಗದರ್ಶನ ನೀಡುವ ಗುರುಸ್ಥಾನದಲ್ಲಿದೆ.
ತೀರಾ ಸಂಕಷ್ಟದಲ್ಲಿದ್ದ ಮಠಕ್ಕೆ ೫೦ ವರ್ಷಗಳ ಹಿಂದೆ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀಮಹಾಂತ ಸ್ವಾಮೀಜಿಗಳು, ಹಲವು ಸಂಕಷ್ಟ, ಸವಾಲಿನ ನಡುವೆಯೂ ಮಠವನ್ನು ಮುನ್ನಡೆಸಿಕೊಂಡು ಬಂದಿದ್ದು, ಇದೀಗ ತಮ್ಮ ಪೀಠಾರೋಹಣದ ಸುವರ್ಣ ಮಹೋತ್ಸವ ಸಮಯದಲ್ಲಿ, ನಾಡಿನ ೫೦ಕ್ಕೂ ಅಧಿಕ ಮಠಗಳ ಪೀಠಾಧಿಪತಿಗಳನ್ನು ಆಹ್ವಾನಿಸಿ, ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ಸುವರ್ಣ ಮಹೋತ್ಸವವನ್ನು ಸುಂದರಗೊಳಿಸಿದ್ದಾರೆ.
ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ, ಕರ್ನಾಟಕ ರತ್ನ ಡಾ.
ಶ್ರೀ ಶಿವಕುಮಾರಸ್ವಾಮೀಜಿ ಜಯಂತಿ, ಶ್ರೀ ನಂಜುAಡಸ್ವಾಮೀಜಿ ಸಂಸ್ಮರಣೋತ್ಸವ, ಶ್ರೀ ನಂಜುAಡೇಶ್ವರ ವಿದ್ಯಾ ಸಂಸ್ಥೆಯ ೨೫ನೇ ವರ್ಷದ ರಜತ ಮಹೋತ್ಸವ, ಪ್ರಸ್ತುತ ಪೀಠಾಧಿಪತಿ ಶ್ರೀ ಮಹಾಂತ ಸ್ವಾಮೀಜಿಗಳ ಪೀಠಾರೋಹಣ ಸುವರ್ಣ ಮಹೋತ್ಸವವನ್ನು ಒಂದೇ ವೇದಿಕೆಯಲ್ಲಿ ನಡೆಸುವ ಮೂಲಕ ಮಠದ ಭಕ್ತರು ಗುರುನಮನ ಸಲ್ಲಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದಲೇ ಕಲ್ಲುಮಠದಲ್ಲಿ ಸಂಭ್ರಮದ ವಾತಾವರಣ ಕಂಡುಬAದಿತು. ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ, ಮೈಸೂರು ಇವರ ಸಹಯೋಗದೊಂದಿಗೆ ಸುಮಾರು ೭೦ ವಟುಗಳಿಗೆ ಮಠದಲ್ಲಿ ಲಿಂಗಧೀಕ್ಷೆ ನಡೆಯಿತು. ವಟುಗಳಿಗೆ ಲಿಂಗ, ಶಿವದಾರ, ಕರಡಿಗೆಯನ್ನು ಉಚಿತವಾಗಿ ನೀಡಲಾಯಿತು.
ಕಲ್ಲುಮಠದ ವಿದ್ಯಾಪೀಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿದ ನಂತರ, ಪಟ್ಟಣದ ಕಡೇಪೇಟೆ ಶ್ರೀಗಣಪತಿ ದೇವಸ್ಥಾನ ದಿಂದ ಕಲ್ಲುಮಠದ ಶಾಲೆಯವರೆಗೆ ನಂದಿಧ್ವಜ, ವೀರಗಾಸೆ, ಪೂರ್ಣಕುಂಭ ಕಳಶ ಹಾಗೂ ಮಂಗಳವಾದ್ಯ ಸಹಿತ ಶ್ರೀಬಸವೇಶ್ವರರು, ಶ್ರೀಶಿವಕುಮಾರ ಸ್ವಾಮೀಜಿ ಹಾಗೂ ನಂಜುAಡ ಸ್ವಾಮೀಜಿಯವರ ಭಾವಚಿತ್ರಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಇದಕ್ಕೂ ಮುನ್ನ ಶ್ರೀಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅತಿಥಿ ಗೃಹವನ್ನು ಶ್ರೀ ಸುತ್ತೂರು ವೀರಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿದರು. ನೂತನ ಗದ್ದುಗೆಯನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಲೋಕಾರ್ಪಣೆ ಗೊಳಿಸಿದರು.
ಧಾರ್ಮಿಕ ಸಂಸ್ಕಾರದ ಜವಾಬ್ದಾರಿ: ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ
(ಮೊದಲ ಪುಟದಿಂದ) ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಕೊಡಗಿನಲ್ಲಿ ಮಠಗಳು ಧಾರ್ಮಿಕ ಸೇವೆ ನಡೆಸಿಕೊಂಡು ಬಂದಿವೆ. ಮಠಗಳ ಅಸ್ತಿತ್ವಕ್ಕೆ ಕೊಡಗನ್ನಾಳಿದ ರಾಜರು ಹೆಚ್ಚಿನ ಸಹಕಾರ ನೀಡಿದ್ದಾರೆ. ಅವರುಗಳ ಕೊಡುಗೆಯನ್ನು ಈ ಸಂದರ್ಭ ನೆನಪಿಸಿಕೊಳ್ಳಬೇಕಿದೆ ಎಂದರಲ್ಲದೆ, ಸಾಮಾಜಿಕ ಸೇವೆಯೊಂದಿಗೆ ಧಾರ್ಮಿಕ ಸಂಸ್ಕಾರ ನೀಡುವುದು ಮಠಗಳ ಜವಾಬ್ದಾರಿಯಾಗಿದೆ ಎಂದರು.
ಮಠಗಳು ಸಮಾಜಕ್ಕೆ ಅರ್ಪಣಾಮನೋಭಾವದಿಂದ ಸೇವೆ ಸಲ್ಲಿಸುತ್ತಿವೆ. ಸಂಸ್ಕೃತಿಯ ಆಚಾರ, ಪೂಜಾನಿಷ್ಠೆ ಕಾಪಾಡುವುದು ಸವಾಲಿನ ಕೆಲಸ. ಇಂತಹ ಸವಾಲನ್ನು ಮಹಾಂತ ಶ್ರೀಗಳು ಸ್ವೀಕರಿಸಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು. ಸಮಾಜವು ಧಾರ್ಮಿಕ ಆಚರಣೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಅಧ್ಯಾತ್ಮಿಕತೆಯೊಂದಿಗೆ ಧಾರ್ಮಿಕ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸುತ್ತೂರು ಶ್ರೀ ವೀರ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಟ್ಟರೆ ಬದುಕು ಸಾರ್ಥಕವಾಗುತ್ತದೆ. ಮಹಾಂತ ಶ್ರೀಗಳು, ಮಠವನ್ನು ಜೀರ್ಣೋದ್ದಾರದೊಂದಿಗೆ, ಇತರ ಕಟ್ಟಡಗಳ ನಿರ್ಮಾಣ, ಶಾಲೆ ಸ್ಥಾಪನೆ ಮಾಡುವುದರೊಂದಿಗೆ ಸಾರ್ಥಕತೆ ಕಂಡಿದ್ದಾರೆ ಎಂದು ಬಣ್ಣಿಸಿದರು.
ಕೊಡಗು ಸಾಹಸಕ್ಕೆ ಹೆಸರಾಗಿದೆ. ಜನರಲ್ ಕಾರ್ಯಪ್ಪ, ತಿಮ್ಮಯ್ಯ ಅಂತಹ ಮೇರು ವ್ಯಕ್ತಿಗಳ ಜನ್ಮನೀಡಿದ ಸ್ಥಳವಾಗಿದೆ. ರಾಷ್ಟ್ರೀಯ ಸಮಗ್ರತೆಗೆ ಕೊಡಗಿನವರು ಹೆಚ್ಚು ಶ್ರಮಿಸಿದ್ದಾರೆ. ಇಂದಿಗೂ ಭಾರತೀಯ ಸೇನೆಯಲ್ಲಿ ಕೊಡಗಿನ ಸೈನಿಕರು ಹೆಚ್ಚಿದ್ದಾರೆ ಎಂದು ಸ್ಮರಿಸಿದರು.
ಕೊಡಗಿನ ಅರಸರಿಂದ ಸಂಸ್ಕೃತಿ-ಸAಸ್ಕಾರ ಉಳಿಸುವ ನಿಟ್ಟಿನಲ್ಲಿ ಮಠಗಳಿಗೆ ಕೊಡುಗೆ ಕೊಟ್ಟಿದ್ದಾರೆ. ಇತ್ತೀಚೆಗೆ ಬಹುತೇಕ ಮಠಗಳು ಅಸ್ತಿತ್ವ ಕಳೆದುಕೊಂಡಿವೆ. ರಾಜ್ಯದಲ್ಲಿ ೩ ಸಾವಿರಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮಠಗಳಿದ್ದವು. ಇಂದು ಸಾವಿರದ ಆಸುಪಾಸಿನಲ್ಲಿವೆ. ಇರುವ ಮಠಗಳು ಸಮಾಜದಲ್ಲಿ ಶಿಕ್ಷಣ, ಧಾರ್ಮಿಕ ಪ್ರಜ್ಞೆ ಮೂಡಿಸುತ್ತಿವೆ. ಸೇವಾ ಕಾರ್ಯ ಮಾಡುತ್ತಿವೆ ಎಂದರು.
ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಠಗಳು ಸಮಾಜಮುಖಿಯಾಗಿರಬೇಕು. ಕಾಯಕ ಪ್ರಜ್ಞೆ ಅಳವಡಿಸಿಕೊಂಡರೆ ಮಾತ್ರ ಜೀವನ ಸಾರ್ಥಕ. ಅಂತಹ ಸಾರ್ಥಕ ಸೇವೆ ಶ್ರೀ ಮಹಾಂತ ಸ್ವಾಮೀಜಿ ಅವರದ್ದು ಎಂದರು.
ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ೧೬೦೦ ರಿಂದ ೧೮೩೪ ರವರೆಗೆ ಕೊಡಗಿನಲ್ಲಿ ೧೦೮ ಮಠಗಳಿದ್ದವು. ಇದರಲ್ಲಿ ೬೪ ವಿರಕ್ತ ಮಠಗಳಿದ್ದವು. ೧೮೦೬ ರಲ್ಲಿ ವೀರರಾಜೇಂದ್ರ ಒಡೆಯರ್ ಅವರ ಸಹಕಾರದಿಂದ ಕಲ್ಲುಮಠಕ್ಕೆ ಹೆಚ್ಚಿನ ಸಹಕಾರ ಲಭಿಸಿತು. ಅಂದಿನಿAದ ಇಲ್ಲಿಯವರೆಗೂ ಶ್ರೀಮಠವು ಭಕ್ತರಿಗೆ ನೆರಳಾಗಿದೆ. ಸಮಾಜ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.
ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಮಠ ಮತ್ತು ಸಮಾಜ ಮಾರ್ಜಾಲ ನ್ಯಾಯ-ಮರ್ಕಟ ನ್ಯಾಯದಂತಿರಬೇಕು. ಶ್ರೀ ಮಠದಿಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಲಭಿಸುತ್ತಿದೆ. ಭಕ್ತರ ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಲಾಗಿದೆ. ಸ್ವಾಮೀಜಿಗಳ ಜೀವನ ಹಾದಿ ಸುಖದ ದಾರಿಯಲ್ಲ; ಎಲ್ಲವನ್ನೂ ಸಹಿಸಿಕೊಂಡು ಮುಂದೆ ಸಾಗಬೇಕಿದೆ ಎಂದರು.
ಕಲ್ಲಳ್ಳಿ ಮಠಾಧೀಶರಾದ ಶ್ರೀ ರುದ್ರಮುನಿ ಸ್ವಾಮೀಜಿ, ಮಲ್ಲನಮೂಲೆ ಮಠದ ಚನ್ನಬಸವ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ್ವರ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ನಿರಂಜನ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಮುದ್ದಿನ ಕಟ್ಟೆ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ೫೦ಕ್ಕೂ ಅಧಿಕ ಮಠಾಧೀಶರು ಉಪಸ್ಥಿತರಿದ್ದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸ್ವಾಗತ ಸಮಿತಿಯ ಅಧ್ಯಕ್ಷ ವಿದ್ಯಾಶಂಕರ್, ಕಾರ್ಯದರ್ಶಿ ಎಸ್. ಮಹೇಶ್, ನಂಜುAಡೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೆಚ್.ಎಂ.ದಿವಾಕರ್, ಪ್ರಾಂಶುಪಾಲ ಅಭಿಲಾಶ್, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್, ಮಹಿಳಾ ಸಮಾಜದ ಅಧ್ಯಕ್ಷೆ ಮಮತ ಸತೀಶ್, ವೀರಶೈವ ಸಮಾಜದ ಆದರ್ಶ್ ಕೂಗೇಕೋಡಿ ಸೇರಿದಂತೆ ಸಮಿತಿ ಸದಸ್ಯರು ಇದ್ದರು.
ಕಾರ್ಯಕ್ರಮದಲ್ಲಿ ಭಕ್ತಸಮೂಹದ ಪರವಾಗಿ ಶ್ರೀ ಮಹಾಂತ ಸ್ವಾಮೀಜಿಗಳಿಗೆ ಗುರುವಂದನೆ ಸಮರ್ಪಿಸಿ ಸನ್ಮಾನಿಸಲಾಯಿತು. ವೀರಶೈವ ಮಹಾಸಭಾದ ರಾಜ್ಯ ಅಧ್ಯಕ್ಷ ಶಂಕರ್ ಬಿದರಿ, ಹೈಕೋರ್ಟ್ ವಕೀಲ ಚಂದ್ರಮೌಳಿ ಸೇರಿದಂತೆ ಇತರ ಸಾಧಕರು, ಸಮಾಜಸೇವಕರನ್ನು ಸನ್ಮಾನಿಸಲಾಯಿತು.
- ವಿಜಯ್ ಹಾನಗಲ್