ಮಡಿಕೇರಿ, ಮೇ ೨: ಆಧುನಿಕ ಯುಗದಲ್ಲಿ ಪ್ರತಿ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದ್ದು, ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆರೋಗ್ಯಯುತವಾಗಿ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕರೆ ನೀಡಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಗರದ ಕಾಲೇಜು ಸಭಾಂಗಣದಲ್ಲಿ ಕಲೋತ್ಸವ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಸ್ಪಷ್ಟತೆ ಇರಬೇಕು. ತೆಗೆದುಕೊಂಡ ನಿರ್ಧಾರ ಅಚಲವಾಗಿರಬೇಕು. ಜೀವನದಲ್ಲಿ ಶಿಸ್ತು ಇದ್ದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್ ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿ ಸದಸ್ಯರಾದ ಅಂಬೆಕಲ್ ನವೀನ್, ಪ್ರಾಧ್ಯಾಪಕರಾದ ಡಾ.ನಿರ್ಮಲ, ಕಾವೇರಿ ಪ್ರಕಾಶ್, ಚೈತ್ರ, ಅನುಪಮ, ಇತರರು ಇದ್ದರು.

ಕಲೋತ್ಸವ ಜಿಲ್ಲಾಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು.