ಮಡಿಕೇರಿ, ಮೇ ೨: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
ನಗರದ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಉಗ್ರರ ದಾಳಿಗೆ ಸಿಲುಕಿ ಹತ್ಯೆಗೀಡಾದ ಅಮಾಯಕರಿಗೆ ಸಂತಾಪ ಸೂಚಿಸಲಾಯಿತು.
ಭಯೋತ್ಪಾದಕರು ನಡೆಸಿದ ಅಮಾನುಷ ಕೃತ್ಯವನ್ನು ಸಭೆ ಖಂಡಿಸಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು ಅವರು, ಭಾರತ ದೇಶದಿಂದ ಭಯೋತ್ಪಾದನೆ ಸಂಪೂರ್ಣವಾಗಿ ನಿಮೂರ್ಲನೆಯಾಗಬೇಕು ಮತ್ತು ದೇಶದ ಒಳಿತಿಗಾಗಿ ಸರ್ವರು ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಸಂಸ್ಥೆಯ ಸ್ಥಾನಿಕ ಆಯುಕ್ತ ಹೆಚ್.ಆರ್. ಮುತ್ತಪ್ಪ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ, ಗೈಡ್ಸ್ ವಿಭಾಗದ ತರಬೇತಿ ಆಯುಕ್ತ ಮೈಥಿಲಿರಾವ್, ಖಜಾಂಚಿ ಟಿ.ಎನ್. ಮುದ್ದಯ್ಯ, ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಭಯೋತ್ಪಾದಕರ ದಾಳಿಯಿಂದ ಮೃತಪಟ್ಟವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.