ಸೋಮವಾರಪೇಟೆ, ಏ. ೩೦: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೋರಮಂಡಲ್ ಇಂಟರ್ನ್ಯಾಷನಲ್ ಇವರ ಸಹಯೋಗದಲ್ಲಿ ಮಹಿಳಾ ಸಮಾಜದಲ್ಲಿ ಗುಣಮಟ್ಟದ ಕಾಫಿ ಮತ್ತು ಕಾಳು ಮೆಣಸು ಬೆಳೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಕೋರಮಂಡಲ್ ಇಂಟರ್ನ್ಯಾಷನಲ್ನ ಹಿರಿಯ ಬೇಸಾಯ ತಜ್ಞ ರಮೇಶ್ ಮಾತನಾಡಿ, ಯಾವುದೇ ಬೆಳೆಯನ್ನು ಬೆಳೆಯುವ ಮುನ್ನ ವರ್ಷಕ್ಕೆ ಒಮ್ಮೆ ಮಣ್ಣು ಪರೀಕ್ಷೆ ಮಾಡಿಸುವುದರಿಂದ, ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಬಹುದು. ಮಣ್ಣಿನ ಪರೀಕ್ಷೆ ಮಾಡುವ ಸಂದರ್ಭ ಮಣ್ಣಿನಲ್ಲಿ ಪೋಷಕಾಂಶಗಳ ವಿವರ ಇರುವುದರಿಂದ ಮಣ್ಣಿನಲ್ಲಿ ಕೊರತೆ ಇರುವ ಪೋಷಕಾಂಶಗಳನ್ನು ಮಾತ್ರ ನೀಡಿದರೆ ಸಾಕಾಗುತ್ತದೆ ಎಂದು ಸಲಹೆ ನೀಡಿದರು.
ಮಣ್ಣಿಗೆ ಅವಶ್ಯಕತೆ ಇಲ್ಲದೆ ಇರುವ ಗೊಬ್ಬರ ಮತ್ತು ಪೋಷಕಾಂಶ ನೀಡಿದಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ಹೆಚ್ಚಿನ ಖರ್ಚಿನೊಂದಿಗೆ ಗುಣಮಟ್ಟದ ಬೆಳೆಯನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ವರ್ಷಕ್ಕೆ ಒಮ್ಮೆ ಕಾಫಿ ಗಿಡದ ಎಲೆ ಪರೀಕ್ಷೆ ಮಾಡಿಸುವುದರಿಂದ ಗಿಡಗಳಲ್ಲಿ ಪೋಷಕಾಂಶ ಕೊರತೆ ತಿಳಿಯಬಹುದಾಗಿದೆ ಎಂದರು.
ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಬಿಸ್ವಾ ರಂಜನ್ ಬೋಯಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯಲು ಉತ್ತಮ ಹವಾಮಾನ ಇದೆ. ನೆರಳಿನಲ್ಲಿ ಕಾಫಿ ಬೆಳೆಯುತ್ತಿರುವುದರಿಂದ ಉತ್ತಮ ಗುಣಮಟ್ಟದ ಕಾಫಿ ಸಿಗುತ್ತದೆ ಎಂದರು.
ಕಾಫಿ ಮಂಡಳಿಯ ನಿರೀಕ್ಷಣಾಧಿಕಾರಿ ಲಕ್ಷಿö್ಮÃಕಾಂತ್ ಮಾತನಾಡಿ, ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಿಗೆ ಮತ್ತು ರಾಸಾಯನಿಕ ಗೊಬ್ಬರಕ್ಕೆ ಹೆಚ್ಚಿನ ಖರ್ಚು ಬರುತ್ತಿದೆ. ಮಣ್ಣಿನ ಪರೀಕ್ಷೆ ಮಾಡಿಸಿದಲ್ಲಿ ಅದರಲ್ಲಿ ಪೋಷಕಾಂಶ ಮತ್ತು ಪಿಎಚ್ ಎಷ್ಟು ಮತ್ತು ಯಾವ ಗೊಬ್ಬರ ನೀಡಬಹುದು ಎಂದು ತಿಳಿಯುತ್ತದೆ ಎಂದು ಮಾಹಿತಿಯಿತ್ತರು.
ವರ್ಷಕ್ಕೆ ಒಮ್ಮೆ ಕೃಷಿ ಸುಣ್ಣವನ್ನು ಭೂಮಿಯಲ್ಲಿ ತೇವಾಂಶ ಇದ್ದಾಗ ಹಾಕಬೇಕು. ಕಾಫಿ ಹೂ ಅರಳುವ ಮುನ್ನ ಒಮ್ಮೆ ಮತ್ತು ನಂತರ ಎರಡು ಬಾರಿ ರಾಸಾಯನಿಕ ಗೊಬ್ಬರ ಮತ್ತು ಇನ್ನಿತರ ಪೋಷಕಾಂಶಗಳನ್ನು ನೀಡಿದ್ದಲ್ಲಿ ಮಾತ್ರ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.
ಕಾರ್ಯಾಗಾರವನ್ನು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಚ್.ಕೆ. ಚಂದ್ರಶೇಖರ್ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಇದ್ದರು.