ಸೋಮವಾರಪೇಟೆ, ಏ. ೨೯: ರಾಜ್ಯ ಸರ್ಕಾರ ೭ ತಿಂಗಳ ಹಿಂದೆ ಭರವಸೆ ನೀಡಿದಂತೆ ಮುಂದಿನ ೧೫ ದಿನಗಳ ಒಳಗೆ ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ರೈತರಿಂದ ಅಹೋರಾತ್ರಿ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ನಂತರ ಕೊಡಗು ಬಂದ್ಗೆ ಕರೆ ನೀಡಲಾಗುವುದು ಎಂದು ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಎಚ್ಚರಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್, ಸಿ ಆ್ಯಂಡ್ ಡಿ ಭೂಮಿ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಂದ ರೈತರಿಗೆ ಅನ್ಯಾಯವಾಗಿದೆ. ಜನಪ್ರತಿನಿಧಿಗಳು ಸುಳ್ಳುಗಳನ್ನೇ ಹೇಳುತ್ತ ಮೋಸ ಮಾಡಿದ್ದಾರೆ. ರೈತರು ರಾಜಕಾರಣಿಗಳ ಮಾತು ಕೇಳಿ ಹಾಳಾಗಿದ್ದಾರೆ. ಕೃಷಿ ಭೂಮಿ ಕಳೆದುಕೊಂಡರೆ ರಾಜಕೀಯ ಪಕ್ಷಗಳು ರೈತರ ರಕ್ಷಣೆ ಮಾಡಲು ಸಾಧ್ಯವೇ ಇಲ್ಲ. ರಾಜಕೀಯ ಪಕ್ಷಗಳ ಸಿದ್ಧಾಂತಕ್ಕೆ ಬಲಿಯಾದರೆ, ತಮ್ಮ ಇಡೀ ಬದುಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ೧೯೭೮ರಲ್ಲಿ ರೈತವಿರೋಧಿ ಕಂದಾಯ ಅಧಿಕಾರಿಗಳು ಸೋಮ ವಾರಪೇಟೆ ತಾಲೂಕಿನ ೨೫ ಸಾವಿರ ಎಕ್ರೆ ಭೂಮಿಯನ್ನು ಸರ್ವೇ ಮಾಡದೆ ಸಿ ಆ್ಯಂಡ್ ಡಿ ಭೂಮಿ ಎಂದು ಗುರುತು ಮಾಡಿ, ದಾಖಲೆ ಸೃಷ್ಟಿ ಮಾಡಿದ್ದಾರೆ. ಈಗ ನೂರಾರು ಮನೆ ಗಳನ್ನು ಸಿ ಆ್ಯಂಡ್ ಡಿ ಭೂಮಿಯಲ್ಲಿ ಕಟ್ಟಿಕೊಂಡಿದ್ದಾರೆ. ನೂರಾರು ಎಕರೆ ಕಾಫಿ ತೋಟಗಳಿವೆ. ಭತ್ತದ ಗದ್ದೆಗಳು ಸೇರಿವೆ. ಈ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದರೆ, ರೈತ ಕುಟುಂಬಗಳು ಆಸ್ತಿ ಕಳೆದುಕೊಂಡು ಗುಳೇ ಹೋಗ ಬೇಕಾದ ಅನಿವಾರ್ಯತೆ ಬರಲಿದೆ. ಎಷ್ಟೋ ಅನ್ನದಾತರು ಆತ್ಮಹತ್ಯೆ ಮಾಡಿ ಕೊಳ್ಳುವ ಸಂದರ್ಭ ಒದಗಬಹುದು ಎಂದು ಎಚ್ಚರಿಸಿದರು. ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಕಳೆದ ೭ ತಿಂಗಳ ಹಿಂದೆ ಸಿ ಆ್ಯಂಡ್ ಡಿ ಭೂಮಿಯ ಸಮಸ್ಯೆ ನಿವಾರಿಸಲು ಉನ್ನತಮಟ್ಟದ ಸಮಿತಿ ರಚಿಸಿ, ಸಮಿತಿಯ ವರದಿಯಂತೆ ರೈತರ ಸಮಸ್ಯೆಯನ್ನು ಬಗೆಹರಿಸ ಲಾಗುವುದು ಎಂದು ಮುಖ್ಯ ಮಂತ್ರಿಗಳು, ಅರಣ್ಯ ಮತ್ತು ಕಂದಾಯ ಸಚಿವರುಗಳು ಭರವಸೆ ನೀಡಿದ್ದರು. ಆದರೆ ಇದುವರೆಗೆ ಸಮಿತಿ ರಚಿಸದೆ, ರೈತರಿಗೆ ಅನ್ಯಾಯ ಮಾಡಲಾಗಿದೆ. ಶನಿವಾರ ಕಲ್ಕಂದೂರು ಗ್ರಾಮದ ರೈತನ ಕೃಷಿ ಭೂಮಿಗೆ ನುಗ್ಗಿರುವ ಅರಣ್ಯ ಇಲಾಖೆ ಹಾಗು ಸರ್ವೇ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಲು ಪ್ರಾರಂಭಿಸಿದ್ದಾರೆ. ಆಸ್ತಿ ಮಾಲೀಕನಿಗೆ ನೋಟೀಸ್ ಕೂಡ ಕೊಡದೆ ಸರ್ವೆಗೆ ಮುಂದಾಗಿರುವುದು, ರೈತ ವಿರೋಧಿ ನೀತಿ ಎಂದು ದೂರಿದರು. ಗೋಷ್ಠಿಯಲ್ಲಿ ರೈತಪರ ಹೋರಾಟಗಾರರಾದ ಕೆ.ಎ. ಪ್ರಕಾಶ್, ಗೌಡಳ್ಳಿ ಪ್ರಸಿ, ಬಿ.ಎಂ. ಸುರೇಶ್ ಇದ್ದರು.