ಕಣಿವೆ, ಏ. ೨೮: ಸಾಧನೆ ಯಾರೊಬ್ಬರ ಸ್ವತ್ತಲ್ಲ. ಸಾಧನೆಗೆ ವಯಸ್ಸಿನ ಪರಿಧಿಗಳಿಲ್ಲ. ಕುಶಾಲನಗರದ ಮಾರುಕಟ್ಟೆ ರಸ್ತೆಯ ೧೦ರ ಪ್ರಾಯದ ಬಾಲಕನೋರ್ವ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ. ಕುಶಾಲನಗರದ ವಕೀಲ ಕೆ.ಪಿ. ಶರತ್ ಹಾಗೂ ಚಂದ್ರಕಲಾ ದಂಪತಿ ಪುತ್ರ.
ಕೆ.ಎಸ್. ಚಿನ್ಮಿತ್. ಕುಶಾಲನಗರದ ಖಾಸಗಿ ಶಾಲೆಯೊಂದರಲ್ಲಿ ಇದೀಗ ಐದನೇ ತರಗತಿ ಪೂರೈಸಿ ೬ನೇ ತರಗತಿಗೆ ಕಾಲಿಟ್ಟಿದ್ದಾನೆ.
ಪ್ರಾಥಮಿಕ ಶಾಲಾ ಹಂತದಲ್ಲಿಯೇ ಬಹಳಷ್ಟು ಕಡೆ ಸ್ಪರ್ಧೆಗೆ ತೆರಳಿ ಬಹುಪಾಲು ಪ್ರಥಮಗಳ ಪ್ರಶಸ್ತಿಗಳು, ಸರ್ಟಿಫಿಕೇಟ್‌ಗಳು ಹಾಗೂ ಸ್ಮರಣಿಕೆಗಳನ್ನು ಬಾಚಿಕೊಂಡಿದ್ದಾನೆ.
ಆರನೇ ವಯಸ್ಸಿನಿಂದ ಚೆಸ್ ನಲ್ಲಿ ತಲ್ಲೀನನಾದ ಚಿನ್ಮಿತ್‌ಗೆ ಕುಶಾಲನಗರದ ಅಬಕಾಸ್ ಸಂಸ್ಥೆಯ ಕುಸುಮ ಎಂಬವರ ತರಬೇತಿಯಿಂದ ಈತ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಚೆಸ್ ಆಟವನ್ನು ಅತ್ಯಂತ ಪರಿಣತಿಯಿಂದ ಆಡಲು ಕಲಿತ. ಕಣ್ಣಿಗೆ ಬಟ್ಟೆ ಕಟ್ಟಿಯೇ ದುಡ್ಡಿನ ನೋಟುಗಳನ್ನು ಪತ್ತೆ ಹಚ್ಚುವುದು, ಅವುಗಳ ಸೀರಿಯಲ್ ನಂಬರ್‌ಗಳನ್ನು ಹೇಳುವುದು ಕರಗತ ಮಾಡಿಕೊಂಡು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ ೩೭ ಸೆಕೆಂಡ್‌ಗಳನ್ನು ಚೆಸ್ ಪೀಸ್‌ಗಳನ್ನು ಜೋಡಿಸುವ ಮೂಲಕ ಈ ಹಿಂದಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ ಬ್ರೇಕ್ ಮಾಡಿದ್ದಾನೆ.
ಈ ಹಿಂದೆ ೩೮ ಸೆಕೆಂಡುಗಳಲ್ಲಿ ಚೆಸ್ ಪೀಸುಗಳನ್ನು ಜೋಡಿಸಿದ ಹಿರಿಮೆಯಿತ್ತು.
ಚಿನ್ಮಿತ್ ಕೇವಲ ೩೭ ಸೆಕೆಂಡುಗಳಲ್ಲಿ ಜೋಡಿಸಿ ರೆಕಾರ್ಡ್ ಬ್ರೇಕ್ ಮಾಡಿದ್ದಾನೆ. ಕಣ್ಣಿಗೆ ಬಟ್ಟೆಕಟ್ಟಿ ಚೆಸ್ ಜೋಡಿಸುವುದನ್ನು ಹೆಚ್ ಡಿ ಕ್ಲಾರಿಟಿ ಉಳ್ಳ ಗುಣಮಟ್ಟದ ರೆಕಾರ್ಡ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ಕಳಿಸಲಾಗಿತ್ತು.
ಇದನ್ನು ಎಲ್ಲಾ ಮಜಲುಗಳಲ್ಲಿ ಪರಿಶೀಲಿಸಿದ ಸಂಸ್ಥೆಯ ಮಂದಿ ಈ ಬಾಲಕನ ಪ್ರತಿಭೆ, ಪರಿಣತಿ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಗೌರವಿಸಿ ತಮ್ಮ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ದಾಖಲು ಮಾಡಿಕೊಂಡಿರುವ ವಿವರವನ್ನು ಅಪ್‌ಲೋಡ್ ಮಾಡಿರುವ ಸಂಸ್ಥೆಯ ಪ್ರಧಾನ ಮುಖ್ಯಸ್ಥ ಡಾ.ಬಿ. ಸ್ವರೂಪ್ ರಾಯ್ ಚೌಧರಿಯವರು ಕುಶಾಲನಗರದ ಚಿನ್ಮಿತ್ ಪೋಷಕರಿಗೂ ಕಳಿಸಿಕೊಟ್ಟಿದ್ದಾರೆ.
ಬ್ಲಿಡ್ಜ್ ಗೇಮ್‌ನಲ್ಲೂ ಸಾಧನೆ
ಕಣ್ಣುಮುಚ್ಚಿ ಕೇವಲ ೩ ನಿಮಿಷದಲ್ಲಿ ಚೆಸ್ ಗೇಮ್ ಆಡಿರುವ ಚಿನ್ಮಿತ್ ಸಾಧನೆ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೂ ಸಲ್ಲಿಸಲಾಗಿದೆ ಎಂದು ಡಾ.ಚೌಧರಿ ತಿಳಿಸಿದ್ದಾರೆ.
ಕಿರಿಯ ವಯಸ್ಸಿನಲ್ಲೇ ಸಾಧನೆ ತೋರಿರುವ ಚಿನ್ಮಿತ್ ಚೆಸ್ ಜೊತೆಗೆ ಷಟಲ್ ಬ್ಯಾಡ್ಮಿಂಟನ್ ಹಾಗೂ ಸ್ವಿಮ್ಮಿಂಗ್ ನಲ್ಲೂ ತೊಡಗಿಸಿಕೊಂಡಿದ್ದಾನೆ.
ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಚಿನ್ಮಿತ್, ನಾನು ಪಠ್ಯಕ್ಕಿಂತಲೂ ಪಠ್ಯೇತರವಾದ ಮಹತ್ವದ ಸಾಧನೆಗಳನ್ನು ಮಾಡಬೇಕೆಂಬ ಹಂಬಲವಿದೆ.
ನನ್ನ ಈ ಸಾಧನೆಗೆ ಅಣ್ಣ ಹಾಗೂ ಅಪ್ಪ-ಅಮ್ಮ ಸ್ಪೂರ್ತಿ.
ಹಾಗೆಯೇ ನಮ್ಮ ಮನೆಯಲ್ಲಿ ಬೇರೆ ಬೇರೆ ಆಸಕ್ತ ಮಕ್ಕಳಿಗೆ ಚೆಸ್ ತರಬೇತಿ ನೀಡುವ ಮಣಿ ಎಂಬವರು ಕೂಡ ಸಾಧನೆಗೆ ಮಾರ್ಗದರ್ಶನ ಮಾಡಿದ್ದಾರೆ. ನಾನೂ ಇನ್ನೂ ಕೂಡ ಹೆಚ್ಚಿನ ಸಾಧನೆಗಳನ್ನು ಮಾಡುತ್ತೇನೆ ಎನ್ನುತ್ತಾನೆ. ಈತನ ಸಹೋದರ ಪ್ರಮಿತ್ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಈತನೂ ಕೂಡ ಚೆಸ್ ಹಾಗೂ ಷಟಲ್ ಬ್ಯಾಡ್ಮಿಂಟನ್ ನಲ್ಲಿ ವಿಶೇಷ ಸಾಧನೆ ತೋರಿದ್ದಾನೆ. ವರದಿ : ಕೆ.ಎಸ್.ಮೂರ್ತಿ