ಪೊನ್ನಂಪೇಟೆ, ಏ. ೨೭ : ಪೊನ್ನಂಪೇಟೆ ತಾಲೂಕಿನ ಮಾಪಿಳ್ಳೆತೋಡು ಗ್ರಾಮದಲ್ಲಿ ಆಲೀರ ಕುಟುಂಬಸ್ಥರ ಜಾಗದಲ್ಲಿ ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಅಯಿಂಡ್ ಕಲ್ಚರ್ ಸಹ ಭಾಗಿತ್ವದಲ್ಲಿ ಆಯೋಜಿಸ ಲಾಗಿರುವ ೨ ನೇ ವರ್ಷದ ಕೊಡವ ಮುಸ್ಲಿಂ ಕುಟುಂಬ ತಂಡಗಳ ನಡುವಿನ ‘ಆಲೀರ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಆಲೀರ ಕುಟುಂಬದ ತಕ್ಕ ಮುಖ್ಯಸ್ಥರಾದ ಆಲೀರ ಎರ್ಮು ಹಾಜಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಯಾವುದೇ ಒಂದು ಜನಾಂಗವನ್ನು ಒಂದೇ ವೇದಿಕೆಯಡಿ ಕರೆತರಲು ಕ್ರೀಡೆ ಸಹಕಾರಿಯಾಗಿದೆ ಎಂದರು.

ಪೊನ್ನಂಪೇಟೆ ಬ್ಲಾಕ್ ವಲಯ ಕಾಂಗ್ರೆಸ್ ಅಧ್ಯಕ್ಷ ಮಿದೇರೀರ ನವೀನ್ ಮಾತನಾಡಿ ಪಂದ್ಯಾವಳಿಯನ್ನು ಉತ್ತಮವಾಗಿ ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಲೀರ ಕುಟುಂಬದ ಸೇವಾ ಸಂಘದ ಅಧ್ಯಕ್ಷ ಆಲೀರ ಪವಿಲ್ ಉಸ್ಮಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಾರ್ಯದರ್ಶಿ ಆಲೀರ ಉಸ್ಮಾನ್, ಆಲೀರ ಕ್ರೀಡಾ ಸಮಿತಿ ಸಂಚಾಲಕ ಆಲೀರ ನಸೀರ್, ಕಾರ್ಯದರ್ಶಿ ಆಲೀರ ರಫೀಕ್, ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಅಯಿಂಡ್ ಕಲ್ಚರ್ ಅಧ್ಯಕ್ಷ ಕುವೆಲರ ಅನೀಸ್, ಮಾಪಿಳೆತೋಡು ಕಲ್ಲಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಆಲೀರ ಪಿ. ಆಲಿ, ಕಾಫಿಬೆಳೆಗಾರ ಆಲೀರ ಅಬ್ದುಲ್ ಲತೀಫ್, ಟ್ರೋಫಿ ದಾನಿಗಳಾದ ಆಲೀರ ಕೆ. ಹಸನ್ ಚೀನಿವಾಡ, ಆಲೀರ ಸಿ. ಅಬು, ಸಮವಸ್ತ್ರ ದಾನಿಗಳಾದ ಆಲೀರ ಉಮ್ಮರ್ ಕಂಬರೆ, ಕಾಫಿ ಬೆಳೆಗಾರ ಆಲೀರ ಅಹ್ಮದ್ ಬಡುವಕೊಪ್ಪ, ಆಲೀರ ಎಂ. ಮೂಸ, ಕಾಫಿ ಬೆಳೆಗಾರ ಮಲ್ಚೀರ ಬೋಪಣ್ಣ, ಆಲೀರ ಎಂ. ಮೊಯ್ದು ಹಾಜಿ, ಹಿರಿಯರಾದ ಆಲೀರ ಕುಟ್ಟಿ ಆಲಿ, ಎ. ಹೆಚ್. ಉಸ್ಮಾನ್, ಯೂಸುಫ್ ಹಾಜಿ, ಆಲೀರ ಉಸ್ಮಾನ್ ಕಾಟ್ರಕೊಲ್ಲಿ, ಆಲೀರ ಉಸ್ಮಾನ್ ವೀರಾಜಪೇಟೆ, ಆಲೀರ ಅಬುಬಕರ್, ಆಲೀರ ಮೊಯ್ದು, ಆಲೀರ ಜುನೈದ್, ಆಲೀರ ಸಜೀರ್, ಕುಂಜಿಲ ಗ್ರಾ. ಪಂ. ಸದಸ್ಯ ರಜಾಕ್, ಆಲೀರ ಮೂಸ ಕಾಟ್ರಕೊಲ್ಲಿ, ಆಲೀರ ನಿಸಾರ್ ಇನ್ನಿತರರು ಹಾಜರಿದ್ದರು.

ಪಂದ್ಯಾವಳಿಯ ಪ್ರತಿ ಪಂದ್ಯದಲ್ಲಿ ಟಾಸ್ ಹಾಕುವ ಪ್ರಕ್ರಿಯೆಗಾಗಿ ಬೆಳ್ಳಿ ನಾಣ್ಯ ಬಳಸಲಾಗುತ್ತಿದ್ದು, ಟಾಸ್ ಗೆದ್ದ ತಂಡದ ನಾಯಕನಿಗೆ ಅದೇ ಬೆಳ್ಳಿ ನಾಣ್ಯವನ್ನು ಕೊಡುಗೆಯಾಗಿ ನೀಡುತ್ತಿರುವುದು ವಿಶೇಷವಾಗಿದೆ. ೮ ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ೭೦ ತಂಡಗಳು ಭಾಗವಹಿಸಲಿವೆ ಪ್ರದರ್ಶನ ಪಂದ್ಯದಲ್ಲಿ ಆಲೀರ ಕುಟುಂಬ ತಂಡದ ವಿರುದ್ಧ ಕಾಟ್ರಕೊಲ್ಲಿ ಬ್ರದರ್ಸ್ ತಂಡ ಗೆಲುವು ಸಾಧಿಸಿತು. ಫೈನಲ್ ಪಂದ್ಯ ಮೇ ೪ ರಂದು ನಡೆಯಲಿದೆ. -ಚನ್ನನಾಯಕ