ಕಣಿವೆ, ಏ. ೨೬: ತೊರೆನೂರು ಗ್ರಾ.ಪಂ. ವ್ಯಾಪ್ತಿಯ ದೊಡ್ಡಅಳುವಾರ ಗ್ರಾಮದ ಗ್ರಾಮದೇವತೆ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವರ ವಾರ್ಷಿಕ ಪೂಜೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಗ್ಗೆ ದೇವರಿಗೆ ವಿವಿಧ ಅಭಿಷೇಕ, ಹೋಮ ಹವನಗಳು ನಡೆದವು. ನಂತರ ದೇವಾಲಯದ ಗರ್ಭಗುಡಿಯಲ್ಲಿನ ದೇವತಾ ಮೂರ್ತಿಗಳನ್ನು ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿ ಮಹಾಪೂಜೆ ನೆರವೇರಿಸಿದರು. ನಂತರ ಭಕ್ತಾಧಿಗಳಿಗೆ ಮಧ್ಯಾಹ್ನದ ಅನ್ನ ಪ್ರಸಾದ ನೆರವೇರಿಸಲಾಯಿತು.
ಈ ಸಂಬAಧ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಧರ್ಮ ಶ್ರದ್ಧಾ ಕೇಂದ್ರಗಳು ಮನುಷ್ಯನನ್ನು ನೈತಿಕವಾಗಿ ಗಟ್ಟಿಮಾಡಬೇಕು. ಮನಸ್ಸನ್ನು ಪ್ರಶಾಂತವಾಗಿ ಇಡಬೇಕು.
ನಿರುಮ್ಮಳವಾದ ಮನಸ್ಥಿತಿ ಹೊಂದುವ ಮೂಲಕ ಆರೋಗ್ಯದಿಂದ ಇರಲು ಸಲಹೆ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ಎ.ಆರ್. ಮಹದೇವ್, ತೊರೆನೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಪ್ರಕಾಶ್, ಅಳುವಾರದಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಎನ್. ರಮೇಶ್, ಗ್ರಾ.ಪಂ. ಸದಸ್ಯ ಕೆ.ಬಿ. ದೇವರಾಜು, ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಸಂಜೀವಯ್ಯ, ಗ್ಯಾರಂಟಿ ಸಮಿತಿ ಸದಸ್ಯ ಅಳುವಾರ ಕಿಶೋರ್, ಹೆಚ್.ಎನ್. ರಾಜಶೇಖರ್, ಕೆ.ಎಸ್. ಕೃಷ್ಣೇಗೌಡ ಇದ್ದರು. ದೇವಾಲಯದ ಅರ್ಚಕ ದೇವರಾಜು ಹಾಗೂ ಜಗದೀಶ್ ಪೂಜಾ ವಿಧಿ ನಡೆಸಿಕೊಟ್ಟರು.