ಕುಶಾಲನಗರ, ಏ. ೨೬: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಕುಶಾಲನಗರದಲ್ಲಿ ವಸಂತ ಸಂಭ್ರಮದ ಸಿರಿ ಕವಿಗೋಷ್ಠಿ ನಡೆಯಿತು. ಸ್ಥಳೀಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಭಾರದ್ವಾಜ್ ಕೆ. ಆನಂದ ತೀರ್ಥ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕವಿತೆಗಳ ರಚನೆಯ ಜೊತೆಯಲ್ಲಿ ಯುವ ಕವಿಗಳು ಕವಿತೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಾಗಿದೆ, ಅವುಗಳನ್ನು ಅರ್ಥೈಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಕಾವ್ಯಗಳನ್ನು ರಚಿಸಲು ಪೂರಕವಾಗುವುದು. ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ, ಕ್ರಿಯಾಶೀಲವಾಗಿ ಅಭ್ಯಾಸ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಶಿರಂಗಾಲ ಪದವಿಪೂರ್ವ ಕಾಲೇಜು ಶಿಕ್ಷಕ ಹಂಡ್ರAಗಿ ನಾಗರಾಜ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಎಂ. ಧನಂಜಯ, ಪೀಪಲ್ಸ್ ಪಾರ್ಕ್ ಕಾಲೇಜು ಮೈಸೂರಿನ ಉಪನ್ಯಾಸಕರಾದ ಪಿ.ಎಸ್. ಜಾನ್, ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ತಮ್ಮಯ್ಯ, ನಿವೃತ್ತ ಕಲಾ ಶಿಕ್ಷಕ ಊ.ರಾ. ನಾಗೇಶ್, ನಿವೃತ್ತ ಉಪನ್ಯಾಸಕ ಭೋಜಣ್ಣ ರೆಡ್ಡಿ, ಬಳಗದ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ, ಹೇಮಂತ್ ಪಾರೇರಾ ಸೇರಿದಂತೆ ಸದಸ್ಯರು ಇದ್ದರು. ಜಿಲ್ಲೆಯ ೩೦ಕ್ಕೂ ಹೆಚ್ಚು ಕವಿಗಳು ಸ್ವ ರಚಿತ ಕವನಗಳನ್ನು ವಾಚಿಸಿದರು. ಊ. ರಾ ನಾಗೇಶ್ ಕಾರ್ಯಕ್ರಮ ನಿರೂಪಣೆ, ಶರ್ಮಿಳಾ ರಮೇಶ್ ಪ್ರಾರ್ಥಿಸಿದರು. ರಾಣಿ ರವೀಂದ್ರ ಸ್ವಾಗತಿಸಿ, ವಂದಿಸಿದರು.