ಮಡಿಕೇರಿ, ಏ. ೨೬ : ಅಖಿಲ ಕೊಡವ ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವೀರಾಜಪೇಟೆ ಶಾಸಕರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲಾಯಿತು. ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಮನವಿಯ ಸಾರಾಂಶ ಈ ರೀತಿ ಇದೆ.

ಕಳೆದ ಹಲವು ವರ್ಷಗಳಿಂದ ಕಗ್ಗಂಟಾಗಿ ನೆನೆಗುದಿಗೆ ಬಿದ್ದಿದ್ದ ಸರಕಾರದ ಅನುಸೂಚಿತ ಪ್ರವರ್ಗಗಳಲಿ ್ಲ“ಕೊಡಗರು” ಎಂದು ತಪ್ಪಾಗಿ ವರ್ಗೀಕರಿಸಿದ್ದ ಪದನಾಮವನ್ನು ತಮ್ಮ ಅಧಿಕಾರಾವಧಿಯಲ್ಲಿ “ಕೊಡವರು” ಎಂದು ನ್ಯಾಯಬದ್ಧವಾಗಿ ವರ್ಗೀಕರಿಸಲಾಯಿತು.

ಬೆಂಗಳೂರು ಕೊಡವ ಸಮಾಜದ ಸ್ವಾಧೀನದಲ್ಲಿದ್ದ ೭ ಎಕರೆ ಸರಕಾರದ ಜಾಗವನ್ನು (ಯಲಹಂಕ ತಾಲೂಕು ಹೊಸಹಳ್ಳಿ ಗ್ರಾಮ) ಖಾಯಂ ಮಂಜೂರಾತಿ ಮಾಡಿ ರಿಯಾಯಿತಿ ದರದಲ್ಲಿ ನೇರ ಖರೀದಿ ಮಾಡಲು ಅನುವಾಗುವಂತೆ ಎ.ಎಸ್. ಪೊನ್ನಣ್ಣ ಅವರು ತಮ್ಮಲ್ಲಿ ವಿನಂತಿಸಿದ ಮೇರೆಗೆ ತಾವುಗಳು ಸ್ಪಂದಿಸಿದಿರಿ.

ಆದಿಮ ಸಂಜಾತ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗವಾಗಿರುವ ಕೊಡವ ಜನಾಂಗಕ್ಕೆ ಸೇರಿದ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಪ್ರತಿನಿಧಿಸುತ್ತಿರುವ ಕೊಡಗು ಜಿಲ್ಲೆಯು ಸೂಕ್ಷö್ಮ ಪ್ರದೇಶವಾಗಿದ್ದು ಇಲ್ಲಿ ಕ್ಷಿಪ್ರಗತಿಯಲ್ಲಿ ಕೈಗೊಂಡಿರುವ ಕೆಲವು ಪ್ರಗತಿಪರ ಯೋಜನೆಗಳಿಂದ ಪೊನ್ನಣ್ಣ ಅವರು ಕೊಡಗಿನ ಜನಪ್ರಿಯ ಶಾಸಕರಾಗಿ ಹೊರಹೊಮ್ಮಿದ್ದಾರೆ.

ಕೊಡಗು ಜಿಲ್ಲೆಯವರೇ ಆದ ಎ.ಎಸ್. ಪೊನ್ನಣ್ಣ ಅವರಂತಹ ಸಮರ್ಥರಿಗೆ ಪ್ರಾತಿನಿಧ್ಯ ದೊರೆತಲ್ಲಿ ಮಾತ್ರ ಜಿಲ್ಲೆಯ ಅಸ್ಮಿತೆಗೆ, ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ಮುನ್ನಡೆಸಲು ಸಾಧ್ಯವಿದೆ. ಕ್ಲಿಷ್ಟಕರ ಜನಜೀವನ, ಕೊಡಗಿನ ಸೂಕ್ಷö್ಮ ಸಮಸ್ಯೆಗಳು, ಜಿಲ್ಲೆಯಲ್ಲಿ ವಿವಿಧ ಜನಾಂಗಗಳ ವಿಭಿನ್ನ ಸಂಸ್ಕೃತಿಯ ಜನಜೀವನದ ನಾಡಿಮಿಡಿತ ಅರಿತಿರುವ ಸ್ವತಃ ಭಾಷಾ ಅಲ್ಪಸಂಖ್ಯಾತ ಬುಡಕಟ್ಟು ಕೊಡವ ಜನಾಂಗಕ್ಕೆ ಸೇರಿದ ಶಾಸಕ ಎ. ಎಸ್. ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಕೋರುತ್ತೇವೆ.