ಸೋಮವಾರಪೇಟೆ, ಏ. ೨೬: ರೈತರು ಮತ್ತು ಅರಣ್ಯ ಇಲಾಖೆಯ ನಡುವಿನ ಜಾಗದ ಜಟಾಪಟಿ ಇಂದಿಗೂ ಕಗ್ಗಂಟಾಗಿರುವ ನಡುವೆಯೇ ಕಲ್ಕಂದೂರು ಗ್ರಾಮದಲ್ಲಿ ಸೆಕ್ಷನ್ ೪ ವಿಚಾರವಾಗಿ ಅರಣ್ಯ ಇಲಾಖೆಯವರು ಸರ್ವೆಗೆ ಮುಂದಾಗಿದ್ದು, ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ ಒಳಪಡುವ ಕಲ್ಕಂದೂರು ಗ್ರಾಮದಲ್ಲಿ ಇಂದು ಸೆಕ್ಷನ್ ೪ ಗೆ ಸಂಬAಧಿಸಿದAತೆ ಅರಣ್ಯ ಇಲಾಖಾ ಸಿಬ್ಬಂದಿಗಳು ಜಾಗದ ಸರ್ವೆಗೆ ಆಗಮಿಸಿದ್ದು, ಇದಕ್ಕೆ ಸ್ಥಳೀಯರೊಂದಿಗೆ ತಾಲೂಕು ರೈತ ಸಂಘ, ಹೋರಾಟ ಸಮಿತಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಹಲವು ದಶಕಗಳ ಹಿಂದೆಯೇ ಕಾಫಿ ತೋಟಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ಕೃಷಿಕರು ಹಾಗೂ ರೈತರಿಗೆ ಇದೀಗ ಅರಣ್ಯ ಇಲಾಖೆ ಸೆಕ್ಷನ್ ೪ ನೆಪವೊಡ್ಡಿ ತೆರವುಗೊಳಿಸಲು ಮುಂದಾಗುತ್ತಿದೆ ಎಂದು ರೈತರು ಆರೋಪಿಸಿ, ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಕಲ್ಕಂದೂರು ಗ್ರಾಮದಲ್ಲಿ ಕಳೆದ ಅನೇಕ ದಶಕಗಳ ಹಿಂದೆಯೇ ಕಾಫಿ ತೋಟ ಮಾಡಿದ್ದು, ಈವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ಸಿ ಮತ್ತು ಡಿ, ಸೆಕ್ಷನ್ ೪ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಿ, ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಚಿತಾವಣೆ ನಡೆಸಿದೆ ಎಂದು ರೈತ ಮುಖಂಡರು ಆರೋಪಿಸಿದರು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂದು ಕಲ್ಕಂದೂರಿಗೆ ಆಗಮಿಸಿ ಬನ್ನಳ್ಳಿ ಗೋಪಾಲ್ ಎಂಬವರ ಕಾಫಿ ತೋಟವನ್ನು ಸರ್ವೆ ಮಾಡಲು ಮುಂದಾದರು. ವಿಷಯ ತಿಳಿದ ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಸೇರಿದಂತೆ ಇತರರು ಸ್ಥಳಕ್ಕಾಗಮಿಸಿ, ಜಾಗದ ಮಾಲೀಕರಿಗೆ ಮಾಹಿತಿ ನೀಡದೆ ಸರ್ವೆಯನ್ನು ನಡೆಸಲು ಶುರು ಮಾಡಿರುವುದು ಎಷ್ಟು ಸರಿ?

(ಮೊದಲ ಪುಟದಿಂದ) ರೈತರ ಪರ ಈಗಾಗಲೇ ಹಲವಷ್ಟು ಹೋರಾಟಗಳು ನಡೆದಿದ್ದರೂ ಅರಣ್ಯ ಇಲಾಖೆ ದಬ್ಬಾಳಿಕೆಯ ಪ್ರವೃತ್ತಿ ನಡೆಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿ ಮತ್ತು ಡಿ ಜಾಗ ಸಮಸ್ಯೆ ಹಾಗೂ ಸೆಕ್ಷನ್ ೪ ವಿಚಾರವಾಗಿ ಈಗಾಗಲೇ ಹಲವಷ್ಟು ಪ್ರತಿಭಟನೆ ನಡೆದಿದೆ. ವಿಧಾನ ಸಭೆಯಲ್ಲೂ ಚರ್ಚೆಯಾಗಿದೆ. ಸ್ವತಃ ಮುಖ್ಯಮಂತ್ರಿ, ಕಂದಾಯ ಸಚಿವರೇ ಜಂಟಿ ಸರ್ವೆಗೆ ಸ್ಥಳೀಯರನ್ನು ಒಳಗೊಂಡ ಸಮಿತಿ ರಚಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ರೈತರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಇದರ ಪರಿಣಾಮ ಮುಂದೆ ಎದುರಿಸಬೇಕಾಗುತ್ತದೆ ಎಂದು ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಎಚ್ಚರಿಸಿದರು.

ಸಿ ಮತ್ತು ಡಿ ಜಾಗದ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ವಹಿಸಿಲ್ಲ. ಸೆಕ್ಷನ್ ೪ಗೆ ಸಂಬAಧಿಸಿದAತೆ ಮೇಲಧಿಕಾರಿಗಳ ಸೂಚನೆಯ ಮೇರೆ ಕ್ರಮವಹಿಸಲಾಗುತ್ತಿದೆ ಎಂದು ಅರಣ್ಯ ಇಲಾಖಾ ಸಿಬ್ಬಂದಿಗಳು ತಿಳಿಸಿದರು. ನಮ್ಮ ಮನವಿಯ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಬರುವ ವರೆಗೆ ಯಾವುದೇ ಕಾರಣಕ್ಕೂ ಸಿ ಮತ್ತು ಡಿ ಹಾಗೂ ಸೆಕ್ಷನ್ ೪ ವಿಚಾರದಲ್ಲಿ ಸರ್ವೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದ ರೈತ ಮುಖಂಡರು, ಮಧ್ಯಾಹ್ನ ೨ ಗಂಟೆಯಿAದ ೫ ಗಂಟೆಯವರೆಗೂ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ತಡೆವೊಡ್ಡಿದರು. ಸಂಜೆಯ ವೇಳೆಗೆ ಸಿಬ್ಬಂದಿಗಳು ಸ್ಥಳದಿಂದ ಹಿಂತೆರಳಿದರು. ಈ ಸಂದರ್ಭ ರೈತ ಹೋರಾಟ ಸಮಿತಿಯ ಮುಖಂಡರುಗಳಾದ ಗೌಡಳ್ಳಿ ಪ್ರಸ್ಸಿ, ಕೂತಿ ದಿವಾಕರ್, ಆಲೇಕಟ್ಟೆ ಕಿಶೋರ್, ದಳವಾಯಿ ರಾಜು, ಬನ್ನಳ್ಳಿ ಗೋಪಾಲ್, ಕಲ್ಕಂದೂರು ಗಿರೀಶ್, ಪ್ರಸನ್ನ, ಉಮೇಶ್, ಬೆಟ್ಟದಕೊಪ್ಪ ವೆಂಕಟೇಶ್ ಸೇರಿದಂತೆ ಇತರರು ಇದ್ದರು.