ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ
ಬೆಂಗಳೂರು, ಏ. ೨೭: ಪಾಕಿಸ್ತಾನ ಮಾಧ್ಯಮಗಳಲ್ಲೂ ಸಿಎಂ ಸಿದ್ದರಾಮಯ್ಯ ಈಗ ಫೇಮಸ್ ಆಗಿದ್ದಾರೆ. ಭಾರತ ಯುದ್ಧ ಮಾಡಬಾರದು ಎಂದಿದ್ದ ಸಿಎಂ ಅವರ ಹೇಳಿಕೆಯನ್ನು ಪಾಕ್ ಮಾಧ್ಯಮಗಳು ಪ್ರಸಾರ ಮಾಡಿವೆ. ಪಾಕ್ ಮಾಧ್ಯಮಗಳಲ್ಲಿ ಸಿದ್ದರಾಮಯ್ಯನವರ ಹೇಳಿಕೆ ಪ್ರಸಾರವಾದ ಬೆನ್ನಲ್ಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಕ್ಸ್ನಲ್ಲಿ ಬರೆದಿದ್ದಾರೆ. ಪಾಕಿಸ್ತಾನ ರತ್ನ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ಮುಂದೆAದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರಂಟಿ ಎಂದಿದ್ದಾರೆ. ನಿನ್ನೆಯ ತಮ್ಮ ಹೇಳಿಕೆ ಬೆನ್ನಲ್ಲೇ ಇಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಭಯೋತ್ಪಾದನೆ ಯನ್ನು ಬೇರು ಸಹಿತ ಕಿತ್ತಾಕಬೇಕು. ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಎರಡು ವರ್ಷ ಸರ್ಕಾರದ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಭಾರತವನ್ನು ಕೆಣಕಿದರೆ ಅದು ಪಾಕಿಸ್ತಾನವೇ ಆಗಲಿ, ಯಾವುದೇ ದೇಶವಾಗಲಿ ನಾವು ಸಹಿಸಲ್ಲ. ಯಾವುದೇ ಹಂತದ ಯುದ್ಧಕ್ಕೆ ಭಾರತ ಸದಾ ಸಿದ್ಧ, ಸದಾ ಸನ್ನದ್ಧ ಆಗಿರುತ್ತದೆ. ಅನಿವಾರ್ಯತೆ ಆದಾಗ ಯುದ್ಧಕ್ಕೆ ಮುಂದಡಿ ಇಟ್ಟು ನಮ್ಮ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮಗೆ ಗೊತ್ತಿದೆ. ಇದನ್ನು ಭಾರತ ಪ್ರತೀ ಸಂದರ್ಭದಲ್ಲೂ ಸಾಬೀತು ಪಡಿಸಿದೆ. ಇತಿಹಾಸದುದ್ದಕ್ಕೂ ನಾವು ಈ ಎಚ್ಚರವನ್ನು ಮತ್ತು ಸಾರ್ವ ಭೌಮತೆಯನ್ನು ಕಾಪಾಡಿಕೊಂಡೇ ಬಂದಿದ್ದೇವೆ. ಮುಂದಕ್ಕೂ ಇದನ್ನು ಕಾಪಾಡಿಕೊಳ್ಳುತ್ತೇವೆ ಎಂದರು.
ಕಂಚಿ ಕಾಮಕೋಟಿ ಶಂಕರ ಮಠದ ಕಿರಿಯ ಆಚಾರ್ಯರ ಆಯ್ಕೆ
ಬೆಂಗಳೂರು, ಏ. ೨೭: ಕಂಚಿ ಶಂಕರ ಮಠದ ಕಿರಿಯ ಆಚಾರ್ಯರಾಗಿ (ಪೀಠಾಧಿಪತಿಗಳಾಗಿ) ಆಂಧ್ರಪ್ರದೇಶದ ಗಣೇಶ ಶರ್ಮಾ ದ್ರಾವಿಡ್ ಆಯ್ಕೆಯಾಗಿದ್ದಾರೆ. ಕಂಚಿ ಶಂಕರ ಪೀಠವು ಅವರಿಗೆ ತಾ. ೩೦ ರಂದು ಸನ್ಯಾಸ ದೀಕ್ಷೆ ನೀಡುವುದಾಗಿ ಘೋಷಿಸಿದೆ. ಈ ಪವಿತ್ರ ಸಮಾರಂಭವು ೪೮೨ ಬಿ.ಸಿ. ಯಲ್ಲಿ ಕಾಂಚೀಪುರAನಲ್ಲಿ ಶ್ರೀ ಕಂಚಿ ಕಾಮಕೋಟಿ ಪೀಠವನ್ನು ಸ್ಥಾಪಿಸಿದ ಜಗದ್ಗುರು ಆದಿ ಶಂಕರಾಚಾರ್ಯರ ೨೫೩೪ನೇ ಜಯಂತಿ ಮಹೋತ್ಸವದೊಂದಿಗೆ ಸೇರಿಕೊಳ್ಳುತ್ತದೆ. ಶ್ರೀ ಶರ್ಮರು ತಮ್ಮ ವೈದಿಕ ಶಿಕ್ಷಣವನ್ನು ಕರ್ನಾಟಕದ ಚಂದುಕುಟ್ಲು ಹೊಸಮನೆ ರತ್ನಾಕರ ಭಟ್ ಶರ್ಮರಿಂದ ಕಲಿತರು.
ಪಹಲ್ಗಾಮ್ ದಾಳಿ ವಿರುದ್ಧ ಕ್ರಮ: ಸರ್ಕಾರಕ್ಕೆ ಸಂಪೂರ್ಣ ಬೆಂಬಲ-ಖರ್ಗೆ
ಬೆAಗಳೂರು, ಏ. ೨೭: ಪಹಲ್ಗಾಮ್ ಉಗ್ರ ದಾಳಿಯ ಅಪರಾಧಿಗಳ ವಿರುದ್ಧದ ಕ್ರಮಗಳಿಗೆ ತಮ್ಮ ಪಕ್ಷ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ. ಉಗ್ರರ ದಾಳಿಯ ಕುರಿತು ಚರ್ಚಿಸಲು ಗುರುವಾರ ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ, ದೇಶ ಮುಖ್ಯವಾಗಿದ್ದು, ಅದನ್ನು ರಕ್ಷಿಸಲು ಮತ್ತು ಅದರ ಕಲ್ಯಾಣಕ್ಕಾಗಿ ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ ೨೨ ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ ೨೬ ಜನರು ಸಾವನ್ನಪ್ಪಿದ್ದಾರೆ. "ಸರ್ವಪಕ್ಷ ಸಭೆಗೆ ಪ್ರಧಾನಿ ಬರಬೇಕಿತ್ತು. ಅವರು ಬರದಿರುವುದು ಸರಿಯಲ್ಲ. ದೇಶ ಮುಖ್ಯ, ಧರ್ಮ, ಭಾಷೆ ನಂತರ ಬರುತ್ತದೆ. ಆದ್ದರಿಂದ ನಾವೆಲ್ಲರೂ ದೇಶಕ್ಕಾಗಿ ಒಗ್ಗಟ್ಟಿನಿಂದ ಹೋರಾಡಬೇಕು. ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ನಾನು ಹಲವಾರು ಬಾರಿ ಹೇಳಿದ್ದೇನೆ" ಎಂದು ಪ್ರಶ್ನೆಯೊಂದಕ್ಕೆ ಖರ್ಗೆ ಉತ್ತರಿಸಿದರು.