ಕೂಡಿಗೆ, ಏ. ೨೫: ಕೂಡಿಗೆ ಸೈನಿಕ ಶಾಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ನಡುವಿನ ಕಾಲ್ಚೆಂಡು ಕ್ರೀಡಾಕೂಟದಲ್ಲಿ ಆತಿಥೇಯ ಕೂಡಿಗೆ ಸೈನಿಕ ಶಾಲೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಕ್ರೀಡಾಕೂಟದಲ್ಲಿ ಕೇರಳದ ಕಝಕೊಟ್ಟಂ ಸೈನಿಕ ಶಾಲೆ, ತಮಿಳುನಾಡಿನ ಅಮರಾವತಿ ಸೈನಿಕ ಶಾಲೆ, ಆಂಧ್ರಪ್ರದೇಶದ ಕಲಿಕಿರಿ ಸೈನಿಕ ಶಾಲೆ ಹಾಗೂ ಆತಿಥೇಯ ಕೊಡಗು ಸೈನಿಕ ಶಾಲೆಗಳು ಭಾಗವಹಿಸಿದ್ದವು.
ಬಾಲಕರ ಜೂನಿಯರ್, ಸಬ್ ಜೂನಿಯರ್ ಹಾಗೂ ಬಾಲಕಿಯರ ಜೂನಿಯರ್ ವಿಭಾಗಗಳಿಗೆ ನಡೆದ ಪಂದ್ಯದಲ್ಲಿ ಆತಿಥೇಯ ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆ ಎಲ್ಲಾ ಮೂರು ವಿಭಾಗಗಳಲ್ಲಿಯೂ ಪ್ರಥಮ ಸ್ಥಾನವನ್ನು ಗಳಿಸಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.
ಬಾಲಕರ ಜೂನಿಯರ್ ವಿಭಾಗದಲ್ಲಿ ಸೈನಿಕ ಶಾಲೆ ಕಝಕೊಟಂ, ಬಾಲಕರ ಸಬ್ ಜೂನಿಯರ್ ವಿಭಾಗದಲ್ಲಿ ಸೈನಿಕ ಶಾಲೆ ಕಲಿಕಿರಿ ಹಾಗೂ ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಕಲಿಕಿರಿ ತಂಡವು ರನ್ನರ್ ಅಪ್ ತಂಡವಾಗಿ ದ್ವಿತೀಯ ಸ್ಥಾನವನ್ನು ಪಡೆಯಿತು.
ಉತ್ತಮ ಆಟಗಾರ ಪ್ರಶಸ್ತಿಯನ್ನು ಜೂನಿಯರ್ ವಿಭಾಗದಲ್ಲಿ ರೋಹಿತ್ ರಾಜ್, ಸಬ್ ಜೂನಿಯರ್ ವಿಭಾಗದಲ್ಲಿ ಶಿವೇಂದ್ರ, ಹಾಗೂ ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಗೊಲ್ಲ ಮೋಕ್ಷಶ್ರೀ ಪಡೆದುಕೊಂಡರು. ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಬಾಲಕರ ಜೂನಿಯರ್ ವಿಭಾಗದಿಂದ ಆರ್ಯ ಚಿರಾಗ್, ಬಾಲಕರ ಸಬ್ ಜೂನಿಯರ್ ವಿಭಾಗದಲ್ಲಿ ಶಮಂತ್ ಹಾಗೂ ಬಾಲಕಿಯ ಜೂನಿಯರ್ ವಿಭಾದಲ್ಲಿ ಹರಿನಂದ ಪಡೆದರು. ಪಂದ್ಯಪುರುಷ ಪ್ರಶಸ್ತಿಯನ್ನು ಕೂಡಿಗೆ ಸೈನಿಕ ಶಾಲೆ ಕೆಡೆಟ್ ಯಶ್ ಪ್ರತಾಪ್ ತಮ್ಮದಾಗಿಸಿಕೊಂಡರು. ಸಮಾರೋಪ ಸಮಾರಂಭದಲ್ಲಿ ಸೈನಿಕ ಶಾಲೆಯ ಪ್ರಾಂಶುಪಾಲÀ ಕರ್ನಲ್ ಅಮರ್ ಜೀತ್ ಸಿಂಗ್, ಉಪಪ್ರಾಂಶುಪಾಲÀ ಸ್ಕಾ÷್ವ.ಲೀ. ಮೊಹಮ್ಮದ್ ಶಾಜಿ, ದಿವ್ಯಾ ಸಿಂಗ್, ಶಾಲಾ ವೈದ್ಯಾಧಿಕಾರಿ ಡಾ. ಚಿನ್ಮಯಿ ಹಾಗೂ ಹಿರಿಯ ಶಿಕ್ಷಕ ವಿಬಿನ್ ಕುಮಾರ್ ಹಾಜರಿದ್ದರು.