ಡಾ. ಮಂತರ್ ಗೌಡ
ಕುಶಾಲನಗರ, ಏ. ೨೪: ಸದ್ಯದಲ್ಲಿಯೇ ಕುಶಾಲನಗರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಯಾಗಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಕುಶಾಲನಗರ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಪುರಸಭೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೂಚಿಸಿದರು.
ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟಿನ್ ಮೂಲಕ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಶುಚಿ-ರುಚಿ ಯಾದ ಆಹಾರ ಒದಗಿಸಲು ಕುಶಾಲನಗರದಲ್ಲಿ ಶೀಘ್ರದಲ್ಲೇ ಕ್ಯಾಂಟಿನ್ ಲೋಕಾರ್ಪಣೆ ಗೊಳಿಸಲಾಗುವುದು. ಇದರೊಂದಿಗೆ ಪಟ್ಟಣದ ಪ್ರಮುಖ ಆಟೋ ನಿಲ್ದಾಣಕ್ಕೆ ಶೆಲ್ಟರ್ ಒದಗಿಸಲು ಬಂದ ಬೇಡಿಕೆಯನ್ವಯ ಮಳೆ, ಬಿಸಿಲಿನಿಂದ ರಕ್ಷಣೆ ಒದಗಿಸಲು ಶಾಸಕರ ನಿಧಿಯಿಂದ ಶೆಲ್ಟರ್ ನಿರ್ಮಾಣಕ್ಕೆ ಕೂಡ ಚಿಂತನೆ ಹರಿಸಲಾಗಿದೆ. ರೂ. ಎರಡೂವರೆ ಕೋಟಿ ವೆಚ್ಚದಲ್ಲಿ ಮುಂದುವರೆದಿರುವ ಪುರಸಭೆ ವಾಣಿಜ್ಯ ಸಂಕೀರ್ಣ ಕಾಮಗಾರಿ ಕೂಡ ಭರದಿಂದ ಸಾಗಿದ್ದು ಆದಷ್ಟು ಬೇಗ ಅದನ್ನು ಕೂಡ ಪೂರ್ಣಗೊಳಿಸಲಾಗುತ್ತದೆ. ಬೇಡಿಕೆಯಂತೆ ಪಟ್ಟಣದಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ ಸೇರಿದಂತೆ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕೆ ಹೂ ಅಂಗಡಿಗಳನ್ನು ವ್ಯವಸ್ಥಿತವಾಗಿ ನಡೆಸಲು ಕಾರ್ಯ ಯೋಜನೆ ರೂಪಿಸಲಾಗುವುದು ಎಂದರು.
ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರ, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಸದಸ್ಯರಾದ ಶಿವಶಂಕರ್, ಎಂ.ಎA. ಪ್ರಕಾಶ್, ಕುಡಾ ಸದಸ್ಯ ಕಿರಣ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಅಭಿಯಂತರ ರಂಗರಾಮ್, ಮುಖಂಡ ರಂಜನ್ ಹೆಬ್ಬಾಲೆ ಇದ್ದರು.