ಮಡಿಕೇರಿ, ಏ. ೨೪: ಜಿಲ್ಲೆಯ ಹಿರಿಯ ಮುಖಂಡರಲ್ಲಿ ಒಬ್ಬಾರಾಗಿ, ರಾಜಕಾರಣದಲ್ಲಿ ರಾಜ್ಯ, ರಾಷ್ಟçಮಟ್ಟದಲ್ಲೂ ಗುರುತಿಸಲ್ಪಟ್ಟಿದ್ದ, ಖ್ಯಾತ ಉದ್ಯಮಿಯೂ ಆಗಿದ್ದ ಬೊಟ್ಟೋಳಂಡ ಜಿ. ಮಿಟ್ಟು ಚಂಗಪ್ಪ (೮೩) ಅವರು ತಾ. ೨೪ರ ಗುರುವಾರದಂದು ವಿಧಿವಶರಾಗಿದ್ದಾರೆ.

ಕ್ರಿಯಾಶೀಲ ವ್ಯಕ್ತಿಯಾಗಿದ್ದ ಇವರು ಕೆಲ ಸಮಯದಿಂದ ವಯೋ ಸಹಜ ತೊಂದರೆಯಿAದಾಗಿ ತಮ್ಮ ಸಮಯವನ್ನು ಮನೆಯಲ್ಲೇ ಕಳೆಯುತ್ತಿದ್ದರು. ಇಂದು ಸಂಜೆ ೫.೧೫ರ ವೇಳೆಗೆ ಅಮ್ಮತ್ತಿಯ ಅಮೇರಿಕನ್ ಆಸ್ಪತ್ರೆಯಲ್ಲಿ ಇವರು ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಹಲವು ದಶಕಗಳಿಂದ ಗುರುತಿಸಿಕೊಂಡಿದ್ದ ಇವರು ಪಕ್ಷದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು. ಕೆಪಿಸಿಸಿ, ಎಐಸಿಸಿಯಲ್ಲೂ ಉನ್ನತ ಸ್ಥಾನದಲ್ಲಿದ್ದ ಇವರು ಪ್ರಭಾವಿ ರಾಜಕಾರಣಿಯಾಗಿದ್ದರೂ ಎಲ್ಲೂ ತಮ್ಮ ಸೌಜನ್ಯ ಮೀರದ ವ್ಯಕ್ತಿಯಾಗಿ ರಾಜಕಾರಣಕ್ಕೆ ಮಾದರಿಯಾಗಿದ್ದರು.

ಮೂಲತಃ ಪೇರೂರಿನವರಾದ ಮಿಟ್ಟು ಚಂಗಪ್ಪ ಅವರು ನಂತರದಲ್ಲಿ ಮಡಿಕೇರಿಯಲ್ಲಿ ನೆಲೆನಿಂತು ಕಠಿಣ ದುಡಿಮೆಯ ಮೂಲಕ ಅಭಿವೃದ್ಧಿ ಹೊಂದಿ ಹತ್ತು ಹಲವು ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡು ಜನಪ್ರಿಯತೆ ಹೊಂದಿದ್ದರು.

ತಮ್ಮ ಜೀವನದ ಶೈಲಿ, ಉಡುಗೆ, ತೊಡುಗೆ ಗಾಂಭೀರ್ಯತೆಯ ನಡೆ - ನುಡಿಯ ಮೂಲಕ ವರ್ಣರಂಜಿತ ಬದುಕಿನೊಂದಿಗೆ ಮಿಟ್ಟು ಅವರು ಜಿಲ್ಲೆಯಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟವರಾಗಿದ್ದಾರೆ. ಹಲವು ಪ್ರಮುಖ ಚಿತ್ರನಟರು, ಹಿರಿಯ ರಾಜಕಾರಣಿಗಳು, ಉದ್ಯಮಿಗಳ ನಿಕಟ ಸಂಪರ್ಕ - ಸ್ನೇಹವನ್ನು ಸಂಪಾದಿಸಿದ್ದ ಇವರು ಈ ಹಿಂದೆ

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಎಂಎಲ್‌ಸಿ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಿತಗೊಂಡಿದ್ದನ್ನು ಹೊರತುಪಡಿಸಿದರೆ, ರಾಜಕೀಯ ದಲ್ಲಿ ಇನ್ನಾವದೇ ಸ್ಥಾನ- ಮಾನಗಳನ್ನು ಪಡೆಯದೆ ಕೇವಲ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಗುರುತಿಸಿಕೊಂಡಿದ್ದುದು ಇವರ ವಿಶೇಷತೆ . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬದು ಒಂದು ಹಬ್ಬವಿದ್ದಂತೆ. ಇದನ್ನು ದೇಶದ ಪ್ರತಿ ವ್ಯಕ್ತಿಯೂ ತಮ್ಮ ಮತವನ್ನು ಚಲಾಯಿಸುವ ಮೂಲಕ ಸಂಭ್ರಮಿಸಬೇಕು ಎನ್ನುತ್ತಿದ್ದ ಇವರು ತಮ್ಮ ಬದುಕಿನಲ್ಲಿ ಮತದಾನದ ಹಕ್ಕು ದೊರೆತ ಬಳಿಕ ಎದುರಾದ ಪ್ರತಿಯೊಂದು ಚುನಾವಣೆಯಲ್ಲಿ ತಮ್ಮ ಮತಗಟ್ಟೆಯಲ್ಲಿ ಮೊದಲಿ ಗರಾಗಿ ಮತ ಚಲಾಯಿಸುವ ಮೂಲಕ ಮಾದರಿಯಾಗಿದ್ದರು. ಒಟ್ಟು ೩೨ ಬಾರಿ ಮಿಟ್ಟು ಅವರು ಮೊದಲಿಗರಾಗಿ ಮತ ಚಲಾಯಿಸಿದ್ದರು.

ಮಿಟ್ಟು ಚಂಗಪ್ಪ ಅವರ ಮೃತದೇಹವನ್ನು ಸಂಜೆ ಅಮ್ಮತ್ತಿ ಆಸ್ಪತ್ರೆಯಿಂದ ಮಡಿಕೇರಿಯ ಸ್ಟಿವರ್ಟ್ ಹಿಲ್‌ನಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ತಾ. ೨೫ ರಂದು (ಇಂದು) ಬೆಳಿಗ್ಗೆ ೧೦.೩೦ ರಿಂದ ೧.೩೦ರ ತನಕ ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಪರಾಹ್ನ ೨ ಗಂಟೆಗೆ ಮಡಿಕೇರಿ ಕೊಡವ ಸಮಾಜದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮೃತರು ಪತ್ನಿ ಯಶಿ, ಪುತ್ರಿಯರಾದ ಕಾವ್ಯ ಹಾಗೂ ಕೃತಿ ಅವರನ್ನು ಅಗಲಿದ್ದಾರೆ. ಜಿಲ್ಲೆಯ ಹಿರಿಯ ಮುಖಂಡರಾಗಿ ಪ್ರಮುಖ ರಾಜಕಾರಣಿಯೂ ಆಗಿದ್ದ ಶ್ರೀಯುತರ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂತಾಪ : ಮಿಟ್ಟು ಚಂಗಪ್ಪ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್‌ಗೌಡ, ಮಾಜಿ ಸಚಿವರುಗಳಾದ ಯಂ.ಸಿ. ನಾಣಯ್ಯ, ಸುಮಾ ವಸಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಮಾಜಿ ಎಂಎಲ್‌ಸಿ ಎಂ.ಪಿ. ಸುನಿಲ್‌ಸುಬ್ರಮಣಿ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಎಂ.ಪಿ. ಮುತ್ತಪ್ಪ, ಕೆಪಿಸಿಸಿ ಮಾಧ್ಯಮ ಸಂವಹನಾ ವಕ್ತಾರ ಟಿ.ಪಿ. ರಮೇಶ್, ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು, ಕಾಂಗ್ರೆಸ್ ಪ್ರಮುಖ ಎರ್ಮು ಹಾಜಿ, ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಹಾಗೂ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.