ಪೊನ್ನಂಪೇಟೆ, ಏ. ೨೪: ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋತೂರು ಮಾರಮ್ಮ ದೇವಸ್ಥಾನಕ್ಕೆ ತೆರಳುವ ಸುಮಾರು ೧೧ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ದಿಗೊಂಡ ನೂತನ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಹಾಗೂ ಸುಮಾರು ರೂ. ೭ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ರಸ್ತೆ ಕಾಮಗಾರಿ ಶೀಘ್ರವಾಗಿ, ಗುಣಮಟ್ಟವಾಗಿ ಮುಕ್ತಾಯವಾಗಿ ಜನರಿಗೆ ಉಪಯೋಗವಾಗಲಿ. ವಿದ್ಯುಚ್ಛಕ್ತಿ, ಪಿಡಬ್ಲ್ಯೂಡಿ ರಸ್ತೆ, ಆಸ್ಪತ್ರೆ, ಶಿಕ್ಷಣ ಕ್ಷೇತ್ರದಲ್ಲಿನ ಶಾಲಾ, ಕಾಲೇಜು ಎಲ್ಲಾ ಕಡೆಗಳಲ್ಲಿಯೂ ಈ ಬಾರಿ ಹೆಚ್ಚಿನ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕಳೆದ ಹಲವು ವರ್ಷಗಳಿಂದ ಹಿಂದುಳಿದ ಅಭಿವೃದ್ಧಿ ಕಾರ್ಯಗಳನ್ನು ಅಲ್ಪ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ಈ ವರ್ಷ ೧೨೦ ಕೋಟಿ ಅನುದಾನ ಹಾಗೂ ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆ ವತಿಯಿಂದ ೨೦ ಕೋಟಿ ಬಿಡುಗಡೆಯಾಗಿದೆ. ಎರಡು ವರ್ಷ ಕಳೆದ ನಂತರ ಮೇ ತಿಂಗಳಿನಲ್ಲಿ ಸಮಾವೇಶ ನಡೆಸಿ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ನೀಡುವುದಾಗಿ ಹೇಳಿದರು. ಇಲ್ಲಿಯವರೆಗೆ ೪೧೫ ಸಣ್ಣ ಸಣ್ಣ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ. ದಿನಂಪ್ರತಿ ೧೫ ರಿಂದ ೨೦ ರಸ್ತೆ ಕಾಮಗಾರಿಗಳಿಗೆ ಅರ್ಜಿ ಬರುತ್ತಿದೆ. ಸರಕಾರ ಕೊಡಗು ಜಿಲ್ಲೆಗೆ ೨೨೦ ಕೋಟಿಯನ್ನು ಕೇವಲ ವಿದ್ಯುತ್ ಶಕ್ತಿ ಕಾಮಗಾರಿಗೆ ನೀಡಿದ್ದು, ವೀರಾಜಪೇಟೆ ಕ್ಷೇತ್ರಕ್ಕೆ ೯ ಉಪ ವಿಭಾಗಗಳನ್ನು ನಿರ್ಮಿಸಿಕೊಟ್ಟಿದೆ. ಗೋಣಿಕೊಪ್ಪಲು ನೂತನ ಬಸ್ ನಿಲ್ದಾಣ ಕಾಮಗಾರಿಗೆ ೨ ಕೋಟಿಗೂ ಮೇಲ್ಪಟ್ಟು ಹಣ ಬಿಡುಗಡೆ ಆಗಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಮುಂದಿನ ತಿಂಗಳಲ್ಲಿ ನೂತನ ಬಸ್ ನಿಲ್ದಾಣದ ಉದ್ಘಾಟನೆಗೊಳ್ಳಲಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಕಾಮಗಾರಿಯು ೬೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಾಗಿ ಉನ್ನತಿಕರಣವಾದ ನಂತರ ಪೊನ್ನಂಪೇಟೆಯಲ್ಲಿ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿ ಕೊಂಡಿದ್ದೇವೆ.

ಉಳಿದಿರುವ ಕಾಲಾವಧಿಯಲ್ಲಿ ಯಾವುದೇ ಜಾತಿ, ಜನಾಂಗ, ಕ್ಷೇತ್ರ, ಪಕ್ಷವನ್ನು ಪರಿಗಣಿಸದೆ ಅಭಿವೃದ್ಧಿ ಕಾರ್ಯದಲ್ಲಿ ಜನತೆ ತಮ್ಮೊಂದಿಗೆ ಕೈಜೋಡಿಸ ಬೇಕೆಂದರು.

ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾನಂಡ ಪ್ರಥ್ಯು, ಕೋತೂರು ಮಾರಮ್ಮ ದೇವಸ್ಥಾನದ ಅಧ್ಯಕ್ಷ ವಿ.ಟಿ. ರಘು, ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಸ್. ಬೋಪಣ್ಣ, ಕಾನೂರು ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕಾಡ್ಯಮಾಡ ಮಾಚು ಭರತ್, ಮಾಜಿ ತಕ್ಕ ಮುಖ್ಯಸ್ಥರು, ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.