ಮಡಿಕೇರಿ, ಏ. ೨೪: ಸರ್ಕಾರದಿಂದ ಕೊಡಗಿಗೆ ಒದಗಿಬಂದ ಸೌಲಭ್ಯವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕೆ ಹೊರತು ಅದನ್ನು ಯಾವುದೇ ಕಾರಣಕ್ಕೂ ಕೈಬಿಡುವ ಕೆಲಸ ಆಗಬಾರದು ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ಕೊಡಗು ವಿಶ್ವವಿದ್ಯಾಲಯದ ಸಾಧಕ-ಬಾಧಕ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರ್ಕಾರ ರಾಜ್ಯದಲ್ಲಿ ೯ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಚಿಂತನೆ ನಡೆಸಿದ್ದು, ಅದರಲ್ಲಿ ಕೊಡಗು ವಿಶ್ವವಿದ್ಯಾಲಯವೂ ಒಂದು. ನೂರಾರು ಎಕರೆ ಪ್ರದೇಶದಲ್ಲಿ ಈ ವಿ.ವಿ. ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ಸುಸಜ್ಜಿತ ವ್ಯವಸ್ಥೆ ಹೊಂದಿರುವ ವಿವಿಯನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ.

ಈ ಹಿಂದೆ ಸರ್ಕಾರ ಎಲ್ಲಾ ವಿಶ್ವವಿದ್ಯಾಲಯ ಗಳಿಗೆ ರೂ. ೨ ಕೋಟಿ ಅನುದಾನ ನೀಡವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಅನುದಾನವನ್ನು ನೀಡದೆ ವಿವಿಯನ್ನು ಮುಚ್ಚುವ ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಆಂತಕ ಹೆಚ್ಚಾಗಲಿದೆ ಎಂದರು. ಶಿಕ್ಷಣ ತಜ್ಞ ಬಾಚರಣಿಯಂಡ ಪಿ. ಅಪ್ಪಣ್ಣ ಮಾತನಾಡಿ, ಕೊಡಗಿನ ಪ್ರಾದೇಶಿಕ, ಭೌಗೋಳಿಕ, ಸಂಸ್ಕೃತಿ, ಆಚಾರ, ವಿಚಾರಗಳು ತಳಮಟ್ಟ ದಿಂದಲೇ ಸಂಶೋಧನೆಯಾಗಬೇಕು. ಆ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯ ಉಳಿಯಬೇಕು ಎಂದರು.

ಹಿAದೆ ಧಾರ್ಮಿಕ ವಿಚಾರಕ್ಕೆ, ಅಕ್ಷರಭ್ಯಾಸಕ್ಕೆ ಪ್ರಮುಖ್ಯತೆ ಪಡೆದುಕೊಂಡಿತ್ತು. ಆದರೆ ಇಂದು ಸಂಶೋ ಧನೆಯಲ್ಲಿ ವಿಶ್ವವಿದ್ಯಾಲಯಗಳು ಮುಂಚುಣಿಯಲ್ಲಿದೆ. ಆದ್ದರಿಂದ ಸರ್ಕಾರದಿಂದ ವಿವಿಧ ಧನಸಹಾಯ, ಪ್ರೋತ್ಸಾಹ ದೊರೆತ್ತಲ್ಲಿ ಮಾತ್ರ ಸಂಶೋಧನೆ ನಡೆಸಲು ಸಾಧ್ಯ. ಆ ನಿಟ್ಟಿನಲ್ಲಿ ಕೊಡಗು ವಿವಿ ಉಳಿವಿಗೆ ಎಲ್ಲರೂ ಒಮ್ಮನಸಿನಿಂದ ಹೋರಾಟ ಮಾಡಿ ಸರ್ಕಾರವನ್ನು ಎಚ್ಚರಿಸಬೇಕು ಎಂದು ಹೇಳಿದರು.

ಗೊಂದಲದ ಹೇಳಿಕೆ ಬೇಡ

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗು ವಿಶ್ವ ವಿದ್ಯಾಲಯವನ್ನು ಮಂಗಳೂರು ವಿಶ್ವ ವಿದ್ಯಾಲಯಕ್ಕೆ ವಿಲೀನಗೊಳಿಸ ಲಾಗುವುದೆಂದು ಹೇಳಲಾಗುತ್ತಿದೆ. ಆದರೆ ಮಂಗಳೂರು ವಿ.ವಿ.ಯ ಪರಿಸ್ಥಿತಿ ಏನು ಎಂಬುದನ್ನು ಅವಲೋಕ ಮಾಡಬೇಕಾಗಿದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಸುಲಭದ ಶಿಕ್ಷಣ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯ ವನ್ನು ಮುಂದುವರೆಸುವ ಪ್ರಯತ್ನ ನಡೆಯಬೇಕೆ ಹೊರತು, ವಿವಿಗಳಲ್ಲಿ ದಾಖಲಾತಿ ಆರಂಭವಾಗುತ್ತಿರುವ ಸಂದರ್ಭದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ರಾಜ್ಯ ಸರ್ಕಾರದಿಂದ ಅನುದಾನ ನೀಡದಿದ್ದರೂ ಪರವಾಗಿಲ್ಲ, ಕೊಡಗು ವಿ.ವಿ.ಯನ್ನು ಉಳಿಸಿಕೊಂಡು ಗೊಂದಲ ಹೇಳಿಕೆಗಳಿಗೆ ಕಡಿವಾಣ ಹಾಕಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ನಂಬರ್ ಒನ್ ವಿಶ್ವವಿದ್ಯಾಲಯ ಎನಿಸಿಕೊಳ್ಳುವುದರಲ್ಲಿ ಸಂಶವಿಲ್ಲ ಎಂದರು.

ಕೊಡಗು ವಿಶ್ವವಿದ್ಯಾಲಯದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೃಷ್ಣೆಗೌಡ ಮಾತನಾಡಿ, ಜಿಲ್ಲೆಗೊಂದು ವಿಶ್ವವಿದ್ಯಾಲಯ ಆಗಬೇಕು ಎಂಬ ನಿಟ್ಟಿನಲ್ಲಿ ಕೊಡಗಿನಲ್ಲಿ ಕೊಡಗು ವಿಶ್ವವಿದ್ಯಾಲಯ ಆರಂಭಗೊAಡಿದ್ದು, ೧೦ ಶಿಕ್ಷಣ ಸಂಸ್ಥೆಯೊAದಿಗೆ ಒಡಂಬಡಿಕೆ ಮಾಡಿಕೊಂಡು ಉತ್ತಮ ಸಂಸ್ಥೆಯಾಗಿ ನಡೆಯುತ್ತಿದೆ. ಆದರೆ ಕೆಲವರು ಉಪಮುಖ್ಯಮಂತ್ರಿ ಗಳನ್ನು ಪದೇ ಪದೇ ಭೇಟಿ ಮಾಡುವ ಮೂಲಕ ಸರ್ಕಾರಕ್ಕೆ ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿ.ಜೆ.ಪಿ. ಕೊಡಗು ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕೊಡಗು ಜಿಲ್ಲೆ ಹಿಂದಿನಿA ದಲೂ ಶೈಕ್ಷಣಿಕವಾಗಿ ಬೇರೆ ಬೇರೆ ಹಂತದಲ್ಲಿ ಪ್ರಗತಿಯಲ್ಲಿದೆ. ಕೊಡಗು ಶೈಕ್ಷಣಿಕ ಜಿಲ್ಲೆ ಎಂದು ಹೇಳಿಕೊಂಡಿದ್ದರೂ ಹಲವರು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಕೆಲವು ವರ್ಷಗಳಿಂದ ಉನ್ನತ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಹಾಗೂ ಆಡಳಿತಾತ್ಮಕವಾಗಿ ಜಿಲ್ಲೆಗೆ ವಿಶ್ವವಿದ್ಯಾಲಯ ಬೇಕು ಎಂಬ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ನೂತನ ಸರ್ಕಾರದಿಂದ ಲಭಿಸಿದೆ. ಇದೀಗ ವಿ.ವಿ.ಗೆ ಬೇಕಾದ ಮೂಲಭೂತ ಸೌಲಭ್ಯಗಳು ದೊರೆತ್ತಿದೆ. ಆದದೂ ಒಂದು ಬಾರಿ ಕೊಟ್ಟಿದ್ದನ್ನು ಹಿಂದೆ ಪಡೆಯುವುದು ಯಾಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಮಾತನಾಡಿ, ಕೊಡಗು ವಿಶ್ವವಿದ್ಯಾ ಲಯವನ್ನು ಉಳಿಸಿಕೊಳ್ಳಬೇಕಾದರೆ ಅಲ್ಲಿನ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕು. ಈಗಾಗಲೇ ಸಂಪುಟದ ಉಪಸಮಿತಿಗಳನ್ನು ರಚಿಸಿ ಕೊಡಗು ವಿಶ್ವವಿದ್ಯಾಲಯದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಹೇಳಲಾಗಿದೆ. ಆದರೆ ಈಗಾಗಲೇ ಜಿಲ್ಲೆಯಲ್ಲಿರುವ ಕಾರ್ಯಪ್ಪ ಕಾಲೇಜಿನಲ್ಲಿ ಕೆಲವು ವಿಷಯವಾರು ಕೋರ್ಸುಗಳು ಮುಚ್ಚಿಹೋಗಿವೆ. ಹೀಗಿರುವಾಗ ಇಂದಿನ ಆಧುನಿಕರಣದ ವ್ಯವಸ್ಥೆಗೆ ತಕ್ಕಂತೆ ಉಪನ್ಯಾಸಕರ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕ್ಷೀಣತೆ, ಮಾರುಕಟ್ಟೆಯಲ್ಲಿರುವ ಮೌಲ್ಯಧಾರಿತ ಶಿಕ್ಷಣಕ್ಕೆ ಒತ್ತು, ಉದ್ಯೋಗಾ ವಕಾಶಗಳು, ಕೈಗೆಟುವ ಶಿಕ್ಷಣ ನೀಡುವಂತಾಗಬೇಕು. ಅಲ್ಲದೇ ಕೊಡಗು ವಿ.ವಿ. ಇದೀಗ ಪ್ರಾರಂಭವಾಗಿದ್ದರಿAದ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯದಲ್ಲಿ ಅವಕಾಶ ಪಡೆಯಲು ಕಷ್ಟವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಒಂದಷ್ಟು ಕಾಲವಕಾಶ ಅಗತ್ಯ ಇದೆ ಎಂದರು.

ಸಮಾಜ ಸೇವಕ ನಾಪಂಡ ಮುತ್ತಪ್ಪ ಮಾತನಾಡಿ, ಸಧ್ಯದಲ್ಲಿ ಮುಚ್ಚುವ ಮತ್ತು ವಿಲೀನಗೊಳಿಸುವ ಯಾವುದೇ ಪ್ರಕ್ರಿಯೆ ಆಗಲ್ಲ. ಇದಕ್ಕೆ ಬೇಕಾದ ಅನುದಾನವನ್ನು ಒದಗಿಸುವ ಕೆಲಸ ಸರ್ಕಾರ ಮಾಡಬೇಕು. ಯಾವ ಸರ್ಕಾರ ಇದ್ದರೂ ಕೊಡಗಿಗೆ ಬಂದಿದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು. ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಮಾತನಾಡಿ, ಯಾವುದೇ ಕಾರಣಕ್ಕೂ ಕೊಡಗಿನ ವಿ.ವಿ. ಮುಚ್ಚಲು ಬಿಡುವುದಿಲ್ಲ. ಯುವ ಜನರ ಓದಿಗೆ ಅಗತ್ಯವಾದ ವಿ.ವಿ. ಕಳೆದು ಕೊಂಡರೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೂರದ ಊರಿಗೆ ತೆರಳಬೇಕಾಗತ್ತದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದರಿಂದ ಹೆಚ್ಚಿನ ಹೊರೆಯಾಗಲಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡ ಕೊಡಗಿನ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಬಗ್ಗೆ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲಿ

ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಇತರ ಜಿಲ್ಲೆಗಳಿಗೆ ತೆರಳಿ ಶಿಕ್ಷಣ ಪಡೆಯಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ನಮ್ಮದೇ ಜಿಲ್ಲೆಯಲ್ಲಿ ಉತ್ತಮ ಉನ್ನತ ಶಿಕ್ಷಣ ಪಡೆಯಲು ಕೊಡಗು ವಿಶ್ವವಿದ್ಯಾಲಯ ಸಹಕಾರಿ ಯಾಗಿದೆ ಎಂದರು. ಕೊಡಗು ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ಮಾತನಾಡಿ, ಖಾಸಗಿ ವಿ.ವಿ.ಗಳಿಗೆ ಸಿಗುವ ಪ್ರೋತ್ಸಾಹ ಸರ್ಕಾರಿ ವಿಶ್ವವಿದ್ಯಾಲಗಳಿಗೆ ಏಕೆ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಕೆಲವು ಆತಂರಿಕ ಕಾರಣದಿಂದ ವಿದ್ಯಾರ್ಥಿಗಳ ಕೊರತೆ ಇದ್ದು, ಕೌಶಲ್ಯಾಧರಿತ ಶಿಕ್ಷಣ ಇಂದು ಅಗತ್ಯವಾಗಿದ್ದು, ಕೊಡಗು ವಿಶ್ವವಿದ್ಯಾಲಯ ದಲ್ಲಿ ಎಲ್ಲವನ್ನೂ ನೀಡಲಾಗುತ್ತಿದೆ. ಕೊಡಗು ವಿ.ವಿ. ಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ವಿವಿಯ ಅಶ್ಮಿತೆ ಯನ್ನು ಕಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಮತ್ತು ಉಪನ್ಯಾಸಕರ ವರ್ಗವಣೆ ಪೂರ್ಣಗೊಳಿಸಬೇಕು ಎಂದು ಹೇಳಿದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಮತ್ತು ಕೆ.ಎಸ್. ಮೂರ್ತಿ ಮಾತನಾಡಿ, ಕೊಡಗು ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಕ್ರಮ ಕೈಗೊಂಡು ಮುಖ್ಯ ಮಂತ್ರಿಗಳ ಗಮನ ಸೆಳೆಯುವಂತಾಗಲಿ ಎಂದರು.

ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜಕೀಯವನ್ನು ಬದಿಗೊತ್ತಿದಾಗ ಮಾತ್ರ ಶಿಕ್ಷಣ ಕ್ಷೇತ್ರ ಸುಧಾರಣೆ ಕಾಣಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಹಿಂದುಳಿದ ಜಿಲ್ಲೆಗಳಿಗೆ ಮಾತ್ರ ವಿಶ್ವವಿದ್ಯಾಲಯವನ್ನು ನೀಡಲಾಗಿದ್ದು, ಇಲ್ಲಿಯವರೆಗೆ ಕರ್ನಾಟಕದಲ್ಲಿ ಆರ್ಥಿಕ ಕಾರಣವನ್ನು ನೀಡಿ ಯಾವುದೇ ವಿಶ್ವವಿದ್ಯಾಲಯಗಳು ಮುಚ್ಚಿರುವ ಸಂದರ್ಭ ಇಲ್ಲ. ಆದ್ದರಿಂದ ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವಂತಾಗಬೇಕು ಎಂದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷೆ ಹಾಗೂ ಕಾರ್ಯಕ್ರಮದ ಸಂಚಾಲಕಿ ವನಿತಾ ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ನಿರ್ದೇಶಕ ಲೋಹಿತ್ ಸೇರಿದಂತೆ ಮತ್ತಿತರು ಹಾಜರಿದ್ದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಆನಂದ್ ನಿರೂಪಿಸಿದರು. ಕುಶಾಲನಗರದ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಸ್ವಾಗತಿಸಿದರು. ಪ್ಲೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ವಂದಿಸಿದರು.