ಗೋಣಿಕೊಪ್ಪಲು, ಏ. ೨೩: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೧೭ನೇ ದಿನ ೬ ತಂಡಗಳು ಮುನ್ನಡೆ ಸಾಧಿಸಿದವು.
ಉಳುವಂಗಡ ಹಾಗೂ ತೀತರಮಾಡ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉಳುವಂಗಡ ೫ ವಿಕೆಟ್ ಕಳೆದುಕೊಂಡು ೩೭ ರನ್ ಗಳಿಸಿತು. ತೀತರಮಾಡ ೬ ವಿಕೆಟ್ ಕಳೆದುಕೊಂಡು ೩೬ ರನ್ ಗಳಿಸಿ ಸೋಲು ಅನುಭವಿಸಿತು.
ಕಾವಡಿಚಂಡ ವಿರುದ್ಧ ಬೊಟ್ಟಂಗಡ ಭರ್ಜರಿ ೧೦೧ ರನ್‌ಗಳ ಅಂತರದ ಗೆಲುವು ಪಡೆಯಿತು. ಬೊಟ್ಟಂಗಡ ಮೊದಲು ಬ್ಯಾಟಿಂಗ್ ಆರಂಭಿಸಿ ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ಭರ್ಜರಿ ೧೩೪ ರನ್ ಕಲೆ ಹಾಕಿತು. ಕಾವಡಿಚಂಡ ೫ ವಿಕೆಟ್ ಕಳೆದುಕೊಂಡು ಕೇವಲ ೩೩ ರನ್ ಗಳಿಸಿ, ಗುರಿ ಮುಟ್ಟಲು ಸಾಧ್ಯವಾಗದೆ ಪರಾಭವಗೊಂಡಿತು.
ಚಟ್ಟಂಗಡ ನಡುವಿನ ಹಣಾಹಣಿಯಲ್ಲಿ ಮೇದುರ ತಂಡ ಜಯ ದಾಖಲಿಸಿತು. ಮೇದುರ ತಂಡ ೧ ವಿಕೆಟ್ ಕಳೆದುಕೊಂಡು ೫೫ ರನ್ ಗಳಿಸಿತು. ಗುರಿ ಬೆನ್ನತ್ತಿದ ಚಟ್ಟಂಗಡ ೪ ವಿಕೆಟ್ ಕಳೆದುಕೊಂಡು ೫೪ ರನ್ ಗಳಿಸಿತಾದರೂ ಗೆಲುವು ಮಾತ್ರ ಸಾಧಿಸಲಾಗಲಿಲ್ಲ.
ನಾಪಂಡ (ಕಾರುಗುಂದ) ತಂಡವನ್ನು ದಾಸಂಡ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ದಾಸಂಡ ಭರ್ಜರಿ ೧೦೧ ರನ್ ಗಳಿಸಿತು. ನಾಪಂಡ ತಂಡವು ೫೫ ರನ್ ಗಳಿಸಿ ತನ್ನ ೬ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.
ತೆಕ್ಕಡ ತಂಡವು ಪುಡಿಯಂಡ ವಿರುದ್ಧ ಜಯ ಗಳಿಸಿತು. ತೆಕ್ಕಡ ತಂಡವು ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೧೦೨ ರನ್ ಪೇರಿಸಿತು. ಪುಡಿಯಂಡ ೫ ವಿಕೆಟ್ ಕಳೆದುಕೊಂಡು ೬೩ ರನ್ ಸಂಪಾದಿಸಿ ಸೋಲೊಪ್ಪಿಕೊಂಡಿತು.
ಬೊಳ್ಳಂಡ ವಾಕ್‌ಓವರ್‌ನಿಂದ ಜಮ್ಮಡ (ಕೈಕೇರಿ) ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
- ಹೆಚ್.ಕೆ.ಜಗದೀಶ್