ಮಡಿಕೇರಿ, ಏ. ೨೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಗೌಡ ಜನಾಂಗದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ೪ನೇ ದಿನವಾದ ಬುಧವಾರದಂದು ಅಮರ ಸುಳ್ಯ ರಾಯಲ್ಸ್ ಹಾಗೂ ಬಿಳಿಗೇರಿ ಪ್ಲಾಂರ‍್ಸ್ ಕ್ಲಬ್ ತಂಡ ಜಯಭೇರಿ ಬಾರಿಸಿ ಮುಂದಿನ ಹಂತ ಪ್ರವೇಶಿಸಿತು.
ಲಾ ಕಗ್ಗೋಡ್ಲು ನಡುವಿನ ಹಣಾಹಣಿಯಲ್ಲಿ ಅಮರ ಸುಳ್ಯ ರಾಯಲ್ಸ್ ಗೆಲುವು ಸಾಧಿಸಿತು. ಲಾ ಕಗ್ಗೋಡ್ಲು ತಂಡ ೧೩.೪ ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ೬೭ ರನ್‌ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತು. ಗುರಿ ಬೆನ್ನತ್ತಿದ ಅಮರ ಸುಳ್ಯ ೧೨.೫ ಓವರ್‌ಗಳಲ್ಲಿಯೇ ೪ ವಿಕೆಟ್ ನಷ್ಟಕ್ಕೆ ೭೦ ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಅಮರ ಸುಳ್ಯ ರಾಯಲ್ಸ್ ತಂಡದ ನಾಯಕ ಕುಡೆಕಲ್ಲು ಕಾರ್ತಿಕ್ ೪ ವಿಕೆಟ್, ಡಾ. ವೈಶಾಕ್ ೩ ವಿಕೆಟ್ ಪಡೆದು ಮಿಂಚಿದರು.
ಮಡಿಕೇರಿ ಕ್ರಿಕೆಟ್ ಕ್ಲಬ್ ಹಾಗೂ ಬಿಳಿಗೇರಿ ಪ್ಲಾಂರ‍್ಸ್ ಕ್ಲಬ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿಳಿಗೇರಿ ಪ್ಲಾಂರ‍್ಸ್ ಕ್ಲಬ್ ನಿಗದಿತ ೨೦ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ಬರೋಬ್ಬರಿ ೨೫೫ ರನ್ ಪೇರಿಸಿತು. ಬೃಹತ್ ಮೊತ್ತವನ್ನು ಬೆನ್ನುಹತ್ತಿದ ಮಡಿಕೇರಿ ಕ್ರಿಕೆಟ್ ಕ್ಲಬ್ ೨೦ ಓವರ್‌ಗಳ ಅಂತ್ಯಕ್ಕೆ ೮ ವಿಕೆಟ್ ಕಳೆದುಕೊಂಡು ೧೬೦ ರನ್ ಕಲೆಹಾಕಿ ಸೋಲಿಗೆ ಶರಣಾಯಿತು. ೯೬ ರನ್‌ಗಳ ಅಂತರದಲ್ಲಿ ಪ್ಲಾಂರ‍್ಸ್ ಕ್ಲಬ್ ಗೆದ್ದು ಬೀಗಿತು.
ಬಿಳಿಗೇರಿ ಪ್ಲಾಂಟರ್ ಕ್ಲಬ್ ತಂಡದ ಲೋಕಿ ಪುತ್ತೂರು ೪೦ ಎಸೆತದಲ್ಲಿ ಬರೋಬ್ಬ ೧೧೬ ರನ್ ಸಿಡಿಸಿ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನೆರವಾದರು.
ಪಂದ್ಯಾಟಕ್ಕೂ ಮುನ್ನ ಜಮ್ಮು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದ ಕ್ರೀಡಾಪಟುಗಳು ದಾಳಿಯಿಂದ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿದರು.