ಕೋವರ್‌ಕೊಲ್ಲಿ ಇಂದ್ರೇಶ್
ಮೈಸೂರು, ಏ. ೨೩ : ಪತ್ನಿಯನ್ನು ಕೊಲೆ ಮಾಡಿದ ಸುಳ್ಳು ಆರೋಪದಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಪತಿಯನ್ನು ಮೈಸೂರಿನ ೫ನೇ ಜಿಲ್ಲಾ ಹಾಗೂ ಸತ್ರ ಹೆಚ್ಚುವರಿ ನ್ಯಾಯಾಲಯವು ಗೌರವಯುತವಾಗಿ ಬಿಡುಗಡೆ ಮಾಡುವಂತೆ ಬುಧವಾರ ಆದೇಶಿಸಿದೆ.
ಈ ಮೂಲಕ ಕುಶಾಲನಗರದ ಬಸವನಳ್ಳಿ ನಿವಾಸಿ ಸುರೇಶ್‌ಗೆ ಮೂರು ವರ್ಷಗಳ ಕಾನೂನು ಹೋರಾಟದಲ್ಲಿ ನ್ಯಾಯ ದೊರೆತಂತಾಗಿದೆ. ಸುರೇಶ್ ಪತ್ನಿ ಮಲ್ಲಿಗೆ ೨೦೨೨ ರಲ್ಲಿಯೇ ನಾಪತ್ತೆ ಆಗಿದ್ದು ನಂತರ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿದ ಶವವೊಂದನ್ನು ತನಿಖೆ ಮಾಡದೆ ಮಲ್ಲಿಗೆಯದ್ದೇ ಎಂದು ಪರಿಗಣಿಸಿದ ಪೊಲೀಸರು ಕೊಲೆ ಆರೋಪ ಹೊರಿಸಿ ಜೈಲಿಗೆ ಅಟ್ಟಿದ್ದರು. ಆದರೆ ಡಿಎನ್‌ಎ ಪರೀಕ್ಷೆಯಲ್ಲಿ ಹೋಂದಾಣಿಕೆ ಆಗದೆ ಸತ್ಯ ಬಯಲಾಗಿತ್ತಲ್ಲದೆ ಏಪ್ರಿಲ್ ೪ ರಂದು ಮಲ್ಲಿಗೆ ಪತ್ತೆಯಾಗಿ ಕೋರ್ಟ್ಗೆ ಹಾಜರಾಗಿ ತಾನು ಬದುಕಿರುವುದಾಗಿ ತಿಳಿಸಿದ್ದಳು.
ಪ್ರಕರಣದ ವಿಚಾರಣೆ ನಡೆಸಿ ಆದೇಶ ಹೊರಡಿಸಿದ ನ್ಯಾಯಾಲಯ ಸುರೇಶ್‌ಗೆ ರೂ. ೧ ಲಕ್ಷ ಪರಿಹಾರ ನೀಡುವಂತೆ ತಿಳಿಸಿದ್ದು, ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಅಂದಿನ ಬೆಟ್ಟದಪುರ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಪ್ರಕಾಶ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿ ತನಿಖೆಗೆ ಆದೇಶಿಸಿದೆ.
ಸುರೇಶ್ ಪರ ವಕೀಲ ಪಾಂಡು ಪೂಜಾರಿ ಮಾತನಾಡಿ, ನ್ಯಾಯಾಲಯವು ಕಕ್ಷಿದಾರನನ್ನು ಗೌರವಯುತವಾಗಿ ಬಿಡುಗಡೆ ಮಾಡಿದೆ. ಕಕ್ಷಿದಾರ ವಿರುದ್ಧ ಸುಳ್ಳು ಆರೋಪ ಮಾಡಿದ್ದವರಿಗೆ ಹಾಗೂ ಇನ್ಸ್ಪೆಕ್ಟರ್ ಬಿ.ಜಿ. ಪ್ರಕಾಶ್ ಅವರ ವಿರುದ್ಧ ಭಾರತ ದಂಡ ಸಂಹಿತೆ ೧೯೩ ಮತ್ತು ೧೯೫ರ ಅಡಿ ಸಾಕ್ಷಿ ಸೃಷ್ಟಿ ಮತ್ತು ಫ್ಯಾಬ್ರಿಕೇಶನ್ ಡಾಕ್ಯುಮೆಂಟ್ ಆಧಾರದ ಮೇಲೆ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ ಎಂದು ಹೇಳಿದರು.
ಯುಡಿಆರ್ ಆಧಾರದ ಮೇಲೆ ಪೊಲೀಸರಾದ ಮಹೇಶ್ ಕುಮಾರ್, ಪ್ರಕಾಶ್ ಜಟ್ಟಿ ಮನಿ, ಇನ್ಸ್ಪೆಕ್ಟರ್ ಬಿ.ಜಿ. ಪ್ರಕಾಶ್ ಅವರ ವಿರುದ್ಧ ಮೈಸೂರಿನ ಐಜಿಪಿಯವರು ಇಲಾಖಾ ತನಿಖೆ ನಡೆಸಬೇಕು ಎಂದು ಆದೇಶ ಮಾಡಿದೆ. ಇದರ ಜೊತೆ ಪತ್ತೆಯಾಗಿರುವ ಶವದ ಬಗ್ಗೆ ಹೆಚ್ಚು ತನಿಖೆ ಆಗಬೇಕು ಎಂದು ನ್ಯಾಯಾಲಯವು ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಬಿ.ಜಿ. ಪ್ರಕಾಶ್ ಮೇಲೆ ನ್ಯಾಯಾಲಯ ನೈತಿಕ ಹೊಣೆ ಹೊರಿಸಿದೆ. ಇದು ನನಗೆ ಸಮಾಧಾನ ಕಂಡಿಲ್ಲ. ಈ ತನಿಖೆಯಲ್ಲಿ ಪಾಲುದಾರರಾಗಿದ್ದ ಇತರ ಪೊಲೀಸರಿಗೂ ಶಿಕ್ಷೆಯಾಗಬೇಕು. ಮಾಡದ ತಪ್ಪಿಗೆ ನಿರಪರಾಧಿಯನ್ನು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಕ್ಕೆ ರೂ. ೧ ಲಕ್ಷ ಪರಿಹಾರ ನನ್ನ ಕಕ್ಷಿದಾರರಿಗೆ ಸಾಕಾಗುವುದಿಲ್ಲ. ಇದರ ಬಗ್ಗೆ ನಾನು ಉಚ್ಚ ನ್ಯಾಯಾಲಯದಲ್ಲಿ ಮನವಿ ಮಾಡುತ್ತೇನೆ. ಹೆಚ್ಚಿನ ಪರಿಹಾರ ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.