ಮಡಿಕೇರಿ, ಏ. ೨೩: ಜಮ್ಮು ಕಾಶ್ಮೀರದ ಫಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ನಗರದ ಜ. ತಿಮ್ಮಯ್ಯ ವೃತ್ತದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ವಿವಿಧ ಹಿಂದೂಪರ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಯಿತು.
ಪಂಜು ಹಿಡಿದು, ಮಾನವ ಸರಪಳಿ ರಚಿಸಿ, ರಸ್ತೆ ತಡೆ ಹಿಡಿದು ಭಯೋತ್ಪಾದಕರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾನಿರತರು ದಾಳಿಯಿಂದ ಸಾವನ್ನಪ್ಪಿದವರಿಗೆ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಭೋಜೇಗೌಡ ಮಾತನಾಡಿ, ಮತಾಂಧ ಶಕ್ತಿಗಳು ಧರ್ಮವನ್ನು ಗುರಿಯಾಗಿಸಿ ೨೭ಕ್ಕೂ ಹೆಚ್ಚು ಹಿಂದೂಗಳ ಹತ್ಯೆ ಮಾಡಿವೆ. ಹಿಂದೂ ಸಮಾಜ ಈ ಕುರಿತು ಎಚ್ಚೆತ್ತುಕೊಳ್ಳಬೇಕು. ತೀಕ್ಷ÷್ಣವಾಗಿ ಖಂಡಿಸಬೇಕು. ನಮ್ಮ ಸುತ್ತಮುತ್ತಲಿನಲ್ಲಿರುವ ಭಯೋತ್ಪಾಧಕ ಮನಸ್ಥಿತಿ ಹೊಂದಿರುವವರನ್ನು ಸಮಾಜದಿಂದ ದೂರವಿಡುವ ಕೆಲಸವಾಗಬೇಕು. ಬಾಂಗ್ಲ, ಅಪ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಹಿಂದೂಗಳಿಗೆ ನೆಲೆ ಇಲ್ಲದಾಗಿದೆ. ಮುಂದೆ ಭಾರತದಲ್ಲಿಯೂ ಇದೇ ಸ್ಥಿತಿ ಸೃಷ್ಟಿಯಾಗುವ ಆತಂಕವಿದೆ. ಪ್ರತೀಕಾರಕ್ಕೆ ಪ್ರತೀಕಾರವೇ ಉತ್ತರವಾಗಬೇಕು. ಭಾರತದಲ್ಲಿ ಹಿಂದೂಗಳಿಗೆ ಅತಂತ್ರತೆ ತಂದಿರುವ ರಾಜಕಾರಣವನ್ನು ನಾವೆಲ್ಲ ವಿರೋಧಿಸಬೇಕು. ಹಿಂದೂಗಳನ್ನು ಒಡೆಯುವ ಕೆಲಸ ಸರಕಾರಗಳು ಮಾಡುತ್ತಿವೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಹಿಂದೂ ಹಿತರಕ್ಷಣಾ ಸಮಿತಿ ಹಾಗೂ ಹಿಂದೂ ಪರ ಸಂಘಟನೆಗಳ ಪ್ರಮುಖರಾದ ಕುಕ್ಕೇರ ಅಜಿತ್, ಸುಭಾಷ್ ತಿಮ್ಮಯ್ಯ, ಯೋಗೇಶ್, ಚೇತನ್, ಸುನಿಲ್ ಮಾದಾಪುರ, ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ ಸೇರಿದಂತೆ ಇನ್ನಿತರರು ಹಾಜರಿದ್ದರು.