ಪೊನ್ನಂಪೇಟೆ, ಏ. ೨೨: ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿ.ಇ.ಟಿ ಪರೀಕ್ಷೆ ಬರೆಯಲು ಜನಿವಾರ ತೆಗೆದು ಬರಲು ತಿಳಿಸಿದ ಪ್ರಕರಣ ಖಂಡಿಸಿ, ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರ ತೇಜೋವಧೆ ಮಾಡಲಾಗುತ್ತಿದೆ. ಘಟನೆಯನ್ನು ತೀವ್ರವಾಗಿ ಖಂಡಿಸುವುದರ ಮೂಲಕ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಂದರ್ಭ ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಬ್ರಾಹ್ಮಣ ಸಮುದಾಯವನ್ನು ತುಳಿಯುವಂತಹ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿರುವಂತಹ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಪ್ರಭಾಕರ್ ನೆಲ್ಲಿತ್ತಾಯ ಮಾತನಾಡಿ, ಯಜ್ಞ ಪವಿತ್ರ ಜನಿವಾರ ಬ್ರಾಹ್ಮಣರ ಜನ್ಮ ಸಿದ್ಧ ಹಕ್ಕು. ಇದನ್ನು ಕಸಿದುಕೊಳ್ಳುವಂತಹ ಕೆಲಸ ಸರಕಾರದಿಂದ ಆಗುತ್ತಿದೆ ಎಂದು ಆರೋಪಿಸಿದರು. ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ ಅಧಿಕಾರಿಯ ವಿರುದ್ದ ಕಠಿಣ ಕ್ರಮ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಂಘದ ಸದಸ್ಯ ಶಂಕರ್ ವೈಲಾಯ ಮಾತನಾಡಿದರು.
ಪ್ರಕರಣವನ್ನು ಖಂಡಿಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಮೋಹನ್ ಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ವಲಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕೆದಿಲಾಯ, ಖಜಾಂಚಿ ಪವನ್ ಕಂಡಿಪ್ಪಾಡಿತ್ತಾಯ, ಶ್ರೀಪತಿ ಪಡಂತ್ತಾಯ, ಕೆ ಜಿ ರಾಮಕೃಷ್ಣ ಕಣ್ಣಾರಾಯ, ಸುಂದರ ಪಡಂತ್ತಾಯ, ಮತ್ತಿತರರು ಪಾಲ್ಗೊಂಡಿದ್ದರು.