ಮಡಿಕೇರಿ, ಏ. ೨೨: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕುರಿತ ಕಾರ್ಯಾಗಾರ ನಡೆಯಿತು.
ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವೃತ್ತಿಪರ ಕೋರ್ಸ್ಗಳಲ್ಲಿ ವಿಪುಲ ಅವಕಾಶಗಳಿದ್ದು, ಗುರುಗಳ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಮೆ. ಡಾ.ಬಿ.ರಾಘವ, ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಅತ್ಯವಶ್ಯಕ ಎಂದರು. ವಿದ್ಯಾರ್ಥಿಗಳು ಯಾವ ರೀತಿ ಸಂದರ್ಶನ ಎದುರಿಸಬೇಕು. ಸಂದರ್ಶನ ಎದುರಿಸುವಾಗ ಹೇಗೆ ಆತ್ಮವಿಶ್ವಾಸ ಇರಬೇಕು ಎಂಬುದರ ಬಗ್ಗೆ ವೃತ್ತಿ ಪರಿಣಿತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕ ಹಾಗೂ ಜಿ ಎಂ ಕ್ಲೌಡ್‌ಸ್ಟಾಫಿಂಗ್ ಇಂಡಿಯಾ ಎಲ್‌ಎಲ್‌ಪಿ ಜಗದೀಶ್ ಕುಶಾಲಪ್ಪ ವಿದ್ಯಾರ್ಥಿಗಳಿಗೆ ಅಣುಕು ಸಂದರ್ಶನ, ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ನೀಡಿದರು.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹಾಗೂ ಮಡಿಕೇರಿಯ ಕರ್ನಾಟಕ ಕೋಚಿಂಗ್ ಸೆಂಟರ್‌ನ ಸಿಇಓ ಬೊಟ್ಟಂಗಡ ಗಣಪತಿ ವೃತ್ತಿ ಮಾರ್ಗದರ್ಶನ, ವೃತ್ತಿ ಜೀವನದ ಹಾದಿ, ಕೌಶಲ್ಯಾಭಿವೃದ್ಧಿ, ವೃತ್ತಿ ನೇಮಕಾತಿ, ಕೆರಿಯರ್ ಪಾಥ್ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಪ್ರದೀಪ್ ಭಂಡಾರಿ, ವಿದ್ಯಾರ್ಥಿ ಸಂಘದ ನಾಯಕ ಮಹೇಂದ್ರ, ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಕಾಂತ್ ನಾಯಕ್, ರಾಜೇಂದ್ರ, ತಿಪ್ಪೆಸ್ವಾಮಿ ಸೇರಿದಂತೆ ಕಾಲೇಜು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.