ಕುಶಾಲನಗರ, ಏ. ೧೭: ಕೊಡಗು ಗಡಿ ಭಾಗದ ಕೊಪ್ಪ ಗ್ರಾಮದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಚಾಲಕರನ್ನು ಗುರುತಿಸಿ ದಂಡ ವಿಧಿಸಲು ನಿರ್ಮಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮರಾಗಳು ವಿದ್ಯುತ್ ಬಿಲ್ ಪಾವತಿಸದ ಕಾರಣ ಕಳೆದ ಒಂದು ವಾರದಿಂದ ತನ್ನ ಹಗಲು, ರಾತ್ರಿಯ ಕೆಲಸವನ್ನು ಸ್ಥಗಿತಗೊಳಿಸಿದೆ.
ಕಳೆದ ಒಂದು ವರ್ಷದಿಂದ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸ್ವಯಂ ಚಾಲಿತ ಕ್ಯಾಮರಾವನ್ನು ಅಳವಡಿಸಲಾಗಿತ್ತು.
ಕುಶಾಲನಗರ-ಮೈಸೂರು ಕಡೆಗೆ ದಿನನಿತ್ಯ ತೆರಳುವ ಸಾವಿರಾರು ವಾಹನಗಳ ಚಿತ್ರವನ್ನು ದಾಖಲಿಸಿ ಸಂಚಾರಿ ನಿಯಮ ಉಲ್ಲಂಘಿಸುವ ಚಾಲಕರ ಛಾಯಾಚಿತ್ರ ಪಡೆದು ತಕ್ಷಣ ದಂಡ ಪಾವತಿಸಲು ಸ್ವಯಂ ಚಾಲಿತವಾಗಿ ಈ ಕ್ಯಾಮರಾ ಕಾರ್ಯನಿರ್ವಹಿಸುತ್ತಿತ್ತು.
ಅಂದಾಜಿನ ಪ್ರಕಾರ ಪ್ರತಿ ತಿಂಗಳು ನಾಲ್ಕರಿಂದ ಐದು ಲಕ್ಷ ರೂಗಳ ದಂಡ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಗೆ ಸಂದಾಯವಾಗುತ್ತಿತ್ತು.
ಈ ತಂತ್ರಜ್ಞಾನಕ್ಕೆ ಎಚ್ಚೆತ್ತುಕೊಂಡ ವಾಹನ ಸವಾರರು ಶೇ.೯೦ರಷ್ಟು ಸಂಚಾರಿ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುತ್ತಿದ್ದ ದೃಶ್ಯವೂ ಕಾಣುವಂತಾಗಿತ್ತು. ನಾಲ್ಕು ಚಕ್ರದ ವಾಹನಗಳ ಸವಾರರು ಬೆಲ್ಟ್ ಅಳವಡಿಸುವುದು ಕೂಡ ನಿರಂತರ ಪಾಲನೆ ಕಡ್ಡಾಯವಾಗಿ ಆಗುತ್ತಿತ್ತು. ಈಗ ಇಲಾಖೆಯ ನಿರ್ಲಕ್ಷದಿಂದ ಈ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ.
ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಪಾವತಿಸದೆ ವಿದ್ಯುತ್ ಸಂಪರ್ಕವನ್ನು ವಿದ್ಯುತ್ ಇಲಾಖೆಯವರು ಕಡಿತಗೊಳಿಸಿದ್ದು ಈ ಅವಾಂತರಕ್ಕೆ ಕಾರಣವಾಗಿದೆ.
ಪಿರಿಯಾಪಟ್ಟಣ ಮತ್ತು ಕೊಪ್ಪ ಗ್ರಾಮದ ಈ ಘಟಕಗಳ ಸಾವಿರಾರು ರೂ.ಗಳ ವಿದ್ಯುತ್ ಬಿಲ್ ಇದುವರೆಗೆ ಪಾವತಿಸಿಲ್ಲ. ಈ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. -ಚಂದ್ರಮೋಹನ್