ಮಡಿಕೇರಿ, ಏ. ೧೭: ಅರಣ್ಯ ಇಲಾಖೆ ಗ್ರೂಪ್ ಸಿ ಹುದ್ದೆಗಳಿಗೆ ನಡೆಯುತ್ತಿರುವ ನೇರ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಕೈಗೊಂಡಿದ್ದ ವೈದ್ಯಕೀಯ ತಪಾಸಣೆಗೆ ಉದ್ಯೋಗ ಆಕಾಂಕ್ಷಿಗಳು ಕಾದು ಕಾದು ಬಸವಳಿದರು.
ಜಿಲ್ಲಾ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ೩೩ ಹುದ್ದೆಗಳಿಗೆ ಕೂಡಿಗೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮಂಗಳವಾರದಿAದ ನಡೆಯುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಮಹಿಳೆಯರು ಸೇರಿದಂತೆ ಸುಮಾರು ೩೫೦ ಮಂದಿ ಆಗಮಿಸಿದ್ದಾರೆ.
ದೈಹಿಕ ಸಾಮರ್ಥ್ಯ ಪರೀಕ್ಷೆ ಸಂಬAಧ ವಿದ್ಯಾರ್ಥಿಗಳು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಬೆಳಿಗ್ಗೆ ೫.೩೦ ರಿಂದ ಆಗಮಿಸಿ ಸಂಜೆ ೪ ಗಂಟೆ ತನಕ ಕಾದು ಕುಳಿತರೂ ವೈದ್ಯಕೀಯ ವರದಿ ಸಿಗದೆ ಪರದಾಡಿ ಖಾಲಿ ಕೈಯಲ್ಲಿ ಹಿಂತಿರುಗಿದರು.
ಕಣ್ಣು, ಕಿವಿ, ರಕ್ತ ಸೇರಿದಂತೆ ದೈಹಿಕ ಪರೀಕ್ಷೆ ನಡೆಯಬೇಕಾಗಿತ್ತು. ಆದರೆ, ಕೆಲವೇ ವಿದ್ಯಾರ್ಥಿಗಳ ಪರೀಕ್ಷೆ ನಡೆದಿದೆ. ಆದರೆ, ಅವರಿಗೂ ವರದಿ ದೊರೆಯದೆ ನಿರಾಸೆ ಅನುಭವಿಸಿದರು. ಮಧ್ಯಾಹ್ನ ನಂತರ ವೈದ್ಯರೂ ತೆರಳಿದ ಹಿನ್ನೆಲೆ ಮತ್ತೆ ಇಂದು ಆಗಮಿಸಿ ತಪಾಸಣೆ ಮಾಡಿಸಿಕೊಳ್ಳಬೇಕಾಗಿದೆ.
ದೂರದ ಊರುಗಳಿಂದ ಬಂದವರ ವಾಸ್ತವ್ಯಕ್ಕೆ ಸಮಸ್ಯೆಯಾಗಿದೆ. ಅರಣ್ಯ ಇಲಾಖೆ ಸೂಕ್ತ ಸ್ಪಂದನ ನೀಡುತ್ತಿಲ್ಲ. ಊಟ ಮಾಡದೆ ಕಾದರೂ ಪ್ರಯೋಜನವಾಗಿಲ್ಲ ಎಂದು ಉದ್ಯೋಗಾಂಕ್ಷಿಗಳು ಬೇಸರ ವ್ಯಕ್ತಪಡಿಸಿದರು.