ಸೋಮವಾರಪೇಟೆ, ಏ. ೧೭: ತಾಲೂಕು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಸಂಕಪ್ಪ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು ಅವರು, ಯುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವುದು ಮತ್ತು ಜೀವನ ಮೌಲ್ಯಗಳನ್ನು ಕಲಿಸುವುದು ಸ್ಕೌಟ್ ಮತ್ತು ಗೈಡ್ಸ್ ಉದ್ದೇಶವಾಗಿದೆ ಎಂದು ಹೇಳಿದರು.
ಯುವ ಪೀಳಿಗೆಯ ದೈಹಿಕ, ಮಾನಸಿಕ ಬೆಳವಣಿಗೆ ಈ ಚಳವಳಿಯ ಉದ್ದೇಶವಾಗಿದ್ದು, ೧೯೦೭ರಲ್ಲಿ ರಾಬರ್ಟ್ ಬೇಡನ್ ಫೊವೆಲ್ ಎಂಬ ಸೈನ್ಯಾಧಿಕಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ೨೦ ಮಕ್ಕಳೊಂದಿಗೆ ಚಳವಳಿ ಪ್ರಾರಂಭಿಸಿದರು. ಇವತ್ತು ವಿಶ್ವವ್ಯಾಪಿಯಾಗಿರುವ ಸ್ಕೌಟ್ ಮತ್ತು ಗೈಡ್ಸ್ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು.
ಸAಸ್ಥೆಯ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ನಂಬಿಕೆಗೆ ಅರ್ಹರಾಗಿರಬೇಕು. ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸೋದರ-ಸೋದರಿ ಭಾವನೆಯಿಂದ ಇರಬೇಕು. ಪ್ರಾಣಿ ಮತ್ತು ಪ್ರಕೃತಿ ಪ್ರೇಮಿಯಾಗಿರಬೇಕು. ಶಿಸ್ತು ಪಾಲಿಸಬೇಕು. ಸಾರ್ವಜನಿಕ ಆಸ್ತಿಯನ್ನು ಕಾಪಾಡಬೇಕು. ವಿನಯಶೀಲರಾಗಿರಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಸ್.ಡಿ. ವಿಜೇತ್, ಕಾರ್ಯದರ್ಶಿ ಜ್ಯೋತಿ ಅರುಣ್, ಖಜಾಂಚಿ ಕೆ.ಪಿ. ದಿನೇಶ್, ಉಪಾಧ್ಯಕ್ಷರಾದ ಶೀಲಾ ಡಿಸೋಜ, ಎ.ಪಿ. ವೀರರಾಜು, ಜೆ.ಸಿ. ಶೇಖರ್, ಎಸ್.ಎಂ. ಡಿಸಿಲ್ವಾ, ಜೋಕಿಂವಾಸ್, ವಸಂತಿ ರವೀಂದ್ರ ಮತ್ತು ಪದಾಧಿಕಾರಿಗಳಿಗೆ ಸಂಸ್ಥೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ.ಎ. ಭಾಸ್ಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ಸ್ಕೌಟ್ ಕಮಿಷನರ್ ಜಿಮ್ಮಿ ಸಿಕ್ವೇರಾ, ಜಿಲ್ಲಾ ಗೈಡ್ ಆಯುಕ್ತರಾದ ಪದ್ಮಶ್ರೀ ರಾಣಿ ಮಾಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತಿ, ಜಿಲ್ಲಾ ಸ್ಥಾನಿಕ ಆಯುಕ್ತ ಹೆಚ್.ಆರ್. ಮುತ್ತಪ್ಪ, ಜಿಲ್ಲಾ ಖಜಾಂಚಿ ಟಿ.ಎಂ. ಮುದ್ದಯ್ಯ, ಜಿಲ್ಲಾ ಪ್ರಧಾನ ಆಯುಕ್ತ ಕೆ.ಯು. ರಂಜಿತ್, ಜಿಲ್ಲಾ ಗೈಡ್ಸ್ ತರಬೇತಿ ಆಯುಕ್ತೆ ಮೈಥಲಿರಾವ್, ಜಿಲ್ಲಾ ಸಹಾಯಕ ಗೈಡ್ ಸುಲೋಚನಾ, ಜಿಲ್ಲಾ ಸಂಘಟಕರಾದ ಯು.ಸಿ. ದಮಯಂತಿ ಇದ್ದರು.