ಸಿದ್ದಾಪುರ, ಏ. ೧೭: ಕಾಡಾನೆ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಆಹಾರವನ್ನು ಅರಸಿಕೊಂಡು ಮುಖ್ಯ ರಸ್ತೆಗಾಗಿ ಸಂಚರಿಸುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ಬೀಟಿ ಕಾಡು ಕಾಫಿ ತೋಟದ ಬಳಿ ಮರಿಯಾನೆಗಳು ಸೇರಿದಂತೆ ೧೫ಕ್ಕೂ ಅಧಿಕ ಕಾಡಾನೆಗಳು ರಾಜಾರೋಷವಾಗಿ ಸಂಚರಿಸುತ್ತಿವೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಗುರುವಾರದಂದು ಕಾಡಾನೆಗಳು ಸಾರ್ವಜನಿಕ ರಸ್ತೆಯ ಮುಖಾಂತರ ತೆರಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡುತ್ತಿರುತ್ತದೆ. ಈ ಸಂದರ್ಭದಲ್ಲಿ ಕೆಲವು ಕಾರ್ಮಿಕರು ಕಾಡಾನೆಗಳನ್ನು ಕಂಡ ಕೂಡಲೇ ಕಾಡಾನೆಗಳ ಚಿತ್ರಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಆನೆಗಳ ಬಳಿ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕೋಪಗೊಂಡ ಕಾಡಾನೆಗಳು ದಾಳಿ ನಡೆಸಲು ಮುಂದಾಗುವ ಸಾಧ್ಯತೆ ಇದೆ. ಇದರಿಂದಾಗಿ ಅಪಾಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಕಾಡಾನೆಗಳು ತೆರಳುವ ಸಂದರ್ಭದಲ್ಲಿ ಅವುಗಳ ಬಳಿ ತೆರಳಿ ಫೋಟೋಗಳನ್ನು ತೆಗೆಯದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.
ಬಾಡಗ ಬಾಣಂಗಾಲ ಗ್ರಾಮದಲ್ಲಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಿದರು ಕೂಡ ಕಾಡಾನೆಗಳು ಹಿಂತಿರುಗಿ ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿವೆ. ಇದೀಗ ಹಲಸಿನಕಾಯಿಯನ್ನು ತಿನ್ನಲು ಬರುತ್ತಿದ್ದು ಕಾಫಿ ತೋಟಗಳಲ್ಲಿ ಸುತ್ತಾಡುತ್ತಿರುತ್ತದೆ. ಸರ್ಕಾರವು ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.