ವೀರಾಜಪೇಟೆ, ಏ. ೧೭: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವೀರಾಜಪೇಟೆ ಸೇವಾ ಕೇಂದ್ರದ ವತಿಯಿಂದ ಮೂರು ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ನಡೆದು ಮಕ್ಕಳಲ್ಲಿ ಉತ್ಸಾಹ-ಉಲ್ಲಾಸ ತಂದಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆಯ ವಕೀಲರಾದ ಶೃಂಗ ಸೋಮಣ್ಣ, ಧ್ಯಾನದ ಮಹತ್ವಿಕೆಯನ್ನು ತಿಳಿಸಿ ಅದರ ಅಭ್ಯಾಸ ಮಾಡಿಸಿದರು.

ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಸ್ಕೂಲ್‌ನ ಆಪ್ತ ಸಮಾಲೋಚಕಿ ಮುತ್ತಮ್ಮ ಮಕ್ಕಳಿಗೆ ಸ್ವಯಂ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಮತ್ತು ಆತ್ಮವಿಶ್ವಾಸದ ಬಗ್ಗೆ ತಿಳುವಳಿಕೆ ಕೊಟ್ಟರು. ಚಿತ್ರ ಕಲೆಯಲ್ಲಿ ತಾವೇ ಮಂಡಲದ ಚಿತ್ರಗಳನ್ನು ತಂದು ಬಣ್ಣ ಹಚ್ಚುವುದನ್ನು ತಿಳಿಸಿಕೊಟ್ಟರು.

ಕೇಂದ್ರದ ಮುಖ್ಯ ಸಂಚಾಲಕಿ ಬಿ.ಕೆ. ಕೋಮಲ ಅವರು ಮಕ್ಕಳನ್ನ ಉದ್ದೇಶಿಸಿ ಮಾತನಾಡಿ ಸತ್ಯ ಮೇವ ಜಯತೆ, ನಮ್ಮ ಜೀವನದಲ್ಲಿ ಸತ್ಯತೆಯ ಮೌಲ್ಯ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾದುದು. ಯಾರಲ್ಲಿ ಸತ್ಯತೆ ಇದೆ ಅವರು ನಿರ್ಭಯವಾಗಿ ಇರುತ್ತಾರೆ, ಮತ್ತು ಸದಾ ಖುಷಿಯಲ್ಲಿ ಇರುತ್ತಾರೆ. ಸುಳ್ಳು ಇರುವಲ್ಲಿ ಭಯ, ಅಶಾಂತಿ, ದುಃಖವಿರುತ್ತದೆ. ಪರಮಾತ್ಮನಿಗೆ ಸತ್ಯವೆಂದು ಹೇಳುತ್ತಾರೆ, ಹಾಗೆ ಆತನ ಮಕ್ಕಳು ನಾವು ಆತ್ಮಗಳು ಸತ್ಯ. ಸತ್ಯವೆಂದರೆ ಶಾಶ್ವತ. ಪರಮಾತ್ಮನ ಜ್ಞಾನ, ಸತ್ಯ ಜ್ಞಾನ, ಅದರಿಂದ ಜೀವನ ಜ್ಯೋತಿ ಬೆಳಗುವುದು. ಸತ್ಯತೆ ಇದ್ದಲ್ಲಿ ಸ್ವಚ್ಛತೆ ಇರುವುದು. ನಿಮ್ಮ ಮನಸ್ಸು ಸ್ವಚ್ಛವಾಗಿ ಇದ್ದರೆ ನಿಮ್ಮ ಕೆಲಸವೂ ಸ್ವಚ್ಛವಾಗಿ ಇರುವುದು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟು ಕೊಂಡರೆ ನಿಮಗೂ ಹಾಗೂ ಸಮಾಜಕ್ಕೂ ಆರೋಗ್ಯ ಎಂದರು.

ಬ್ರಹ್ಮಾಕುಮಾರಿ ಶಿವಾನಿ ಮತ್ತು ಅದ್ವಿತೀಯ ವಿದ್ಯಾರ್ಥಿನಿಯರು ಶಿಬಿರದಲ್ಲಿ ನಿತ್ಯ ಪ್ರಾರ್ಥನೆ, ವ್ಯಾಯಾಮ, ಆಟೋಟ, ಹಾಡು, ನೃತ್ಯ ಮಾಡಿಸುವುದರ ಮೂಲಕ ಮಕ್ಕಳನ್ನು ಮನರಂಜಿಸಿದರು. ಸೇವಾಕೇಂದ್ರದಲ್ಲಿ ನಿತ್ಯ ಮಧ್ಯಾಹ್ನ ಭೋಜನ, ಪಾನೀಯ ಹಾಗೂ ಸಂಜೆ ತಿಂಡಿಗಳನ್ನು ನೀಡಲಾಯಿತು. ಪರೀಕ್ಷೆ ಮತ್ತು ಆಟಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯ ಮೂಲಕ ಪ್ರೋತ್ಸಾಹಿಸುವುದರ ಮೂಲಕ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.