ಶ್ರೀಮಂಗಲ, ಏ. ೧೭: ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಸಂಘದ ಸಭಾಂಗಣದಲ್ಲಿ ಬಹುಭಾಷೆ ಸಾಹಿತಿ ಉಳುವಂಗಡ ಕಾವೇರಿ ಉದಯ ರಚಿತ ಕನ್ನಡ ಭಾಷೆಯ ಪುಸ್ತಕ ‘ಸಿಪಾಯಿ ಮಾದಪ್ಪ’ ಕೃತಿ ಹಾಗೂ ಅವರ ೩೬ನೇ ಕೃತಿ ಲೋಕಾರ್ಪಣೆಯಾಯಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪುಸ್ತಕ ದಾನಿ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬಾನಂಗಡ ಅರುಣ ಅವರು ಮಾಜಿ ಸೈನಿಕರು ಸೇವೆಯಲ್ಲಿದ್ದಾಗ ಹಾಗೂ ನಿವೃತ ಜೀವನದಲ್ಲಿ ಹಲವು ಸಮಸ್ಯೆ ಸವಾಲು ಎದುರಿಸುತ್ತಿದ್ದಾರೆ. ದೇಶದ ಗಡಿ ಕಾಯುವ ಸೈನಿಕರ ಬಗ್ಗೆ ಅವರ ಜೀವನದ ಬಗ್ಗೆ ಡಾ. ಉಳುವಂಗಡ ಕಾವೇರಿ ಉದಯ ತಮ್ಮ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಇಂತಹ ಪುಸ್ತಕ ಇನ್ನಷ್ಟು ಹೊರಬರಲಿ. ಮಾಜಿ ಸೈನಿಕರ ಕಂದಾಯ ಇಲಾಖೆಯ ಕೆಲಸಗಳಿಗೆ ತಮ್ಮ ಸೇವೆಯಲ್ಲಿ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಕಾನೂನು ಇತಿಮಿತಿಯಲ್ಲಿ ಮಾಡಿಕೊಡಲು ಪ್ರಾಮುಖ್ಯತೆ ನೀಡುವುದಾಗಿ ಭರವಸೆ ನೀಡಿದರು. ಪುಸ್ತಕ ಖರೀದಿಸಿ ಓದುವ ಅಭ್ಯಾಸ, ಸಾಹಿತ್ಯ ರಚನೆ ಆದ ನಂತರ ಪುಸ್ತಕ ರೂಪದಲ್ಲಿ ತರಲು ಎಲ್ಲರೂ ಪ್ರೋತ್ಸಾಹ ನೀಡಿದಾಗ ಜಿಲ್ಲೆಯಲ್ಲಿ ಹೆಚ್ಚಿನ ಸಾಹಿತಿಗಳು, ಸಾಹಿತ್ಯ ಬೆಳವಣಿಗೆ ಸಾಧ್ಯ ಆಗಲಿದೆ ಎಂದು ಅಭಿಪ್ರಾಯಪಟ್ಟರು. ಸಾಹಿತಿ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಅವರು ಕೃತಿಯ ಬಗ್ಗೆ ವಿಮರ್ಶೆ ಮಾಡಿ, ಮಾಜಿ ಸೈನಿಕರ, ಅವರ ಕುಟುಂಬದ ಸಮಸ್ಯೆ ಸವಾಲುಗಳನ್ನು ಅರಿತುಕೊಂಡು ಪುಸ್ತಕ ಬರೆದಿದ್ದಾರೆ. ತಮ್ಮ ಕುಟುಂಬದ ಎಲ್ಲಾ ಜವಾಬ್ದಾರಿ ನಿರ್ವಹಿಸುತ್ತ ಇಲ್ಲಿವರೆಗೆ ೩೩ ಪುಸ್ತಕವನ್ನು ಡಾ. ಉಳುವಂಗಡ ಕಾವೇರಿ ಉದಯ ಬರೆದಿದ್ದಾರೆ. ಈ ಪುಸ್ತಕವನ್ನು ಖರೀದಿಸಿ ಓದಿ ಸಾಹಿತ್ಯ, ಸಾಹಿತಿಗೆ ನೀಡುವ ಪ್ರೋತ್ಸಾಹವಾಗಿದೆ ಎಂದರು.
ಪುಸ್ತಕದ ವಿಶ್ಲೇಷಕರಾಗಿ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಅವರು ಮಾತನಾಡಿ ಈ ಪುಸ್ತಕ ಬರೆಯಲು ಸಾಹಿತಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಪ್ರತಿ ಪುಸ್ತಕ ರಚನೆಯಲ್ಲಿ ಸಾಂಸಾರಿಕ ಬದುಕಿನ ನಡುವೆ ಪರಿಶ್ರಮದೊಂದಿಗೆ ೩೨೭ ಪುಟದ ೧೨ ಅಧ್ಯಯದ "ಸಿಪಾಯಿ ಮಾದಪ್ಪ" ಪುಸ್ತಕ ರಚನೆ ಮಾಡಿದ್ದಾರೆ, ಅವರ ಸಾಹಿತ್ಯದಲ್ಲಿ ಸ್ಪಷ್ಟತೆ ಮತ್ತು ಸರಳತೆ ಎದ್ದು ಕಾಣುತ್ತಿದೆ ಎಂದರು. ಕಾವೇರಿ ಉದಯ ಅವರು ಮಾತನಾಡಿ, ಸಾಹಿತ್ಯ ರಚನೆ ನಂತರ ಪುಸ್ತಕ ರೂಪದಲ್ಲಿ ತರಲು ದಾನಿಗಳ ಅಗತ್ಯವಿದೆ. ನಾವು ಬರೆದ ಪುಸ್ತಕವನ್ನು ಜನರು ಕೊಂಡು ಓದಿ ಅಭಿಪ್ರಾಯ ತಿಳಿಸಿದಾಗ ಅದೇ ದೊಡ್ಡ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಈ ರೀತಿಯ ಬೆಂಬಲದಿAದ ನಮ್ಮ ಪರಿಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭ ಬಹುದೂರದಲ್ಲಿ ತಮ್ಮ ಸಂಸಾರ, ತಂದೆ ತಾಯಿಗಳನ್ನು ಬಿಟ್ಟು, ಚಿಕ್ಕ ಮಕ್ಕಳನ್ನು ಸಹ ಬಿಟ್ಟು ಸೇನೆಯಲ್ಲಿ ಸೇವೆಯಲ್ಲಿ ತೊಡಗಿಸಿ ಕೊಂಡವರ ತೊಳಲಾಟ ಅವರ ಸಮಸ್ಯೆಗಳು ಅರ್ಥ ಮಾಡಿಕೊಂಡು ಪುಸ್ತಕ ರಚನೆ ಮಾಡಿರುವುದು ಸೇನೆಯಲ್ಲಿರುವವರ ಭಾವನೆಯನ್ನು ಪುಸ್ತಕದಲ್ಲಿ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.
ಸಂಘದ ಸಹಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ ಕಾರ್ಯಕ್ರಮ ನಿರ್ವಹಿಸಿದರು ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಮನ್ನೇರ ರಮೇಶ್, ಕಾರ್ಯದರ್ಶಿ ಚಂಗುಲAಡ ಸತೀಶ್, ಸಹ ಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ, ಖಜಾಂಚಿ ಚೆಟ್ಟಂಗಡ ವಿಜಯ ಕಾರ್ಯಪ್ಪ, ನಿರ್ದೇಶಕರುಗಳಾದ ಮಚ್ಚಮಾಡ ಮನು ಕುಶಾಲಪ್ಪ, ಮಂದಮಾಡ ಬೆಳ್ಯಪ್ಪ, ಮೀದೇರಿರ ಸುರೇಶ, ಚೊಟ್ಟೆಯಂಡಮಾಡ ಅರಸು ಗೋಕುಲ, ಕರ್ನಂಡ ಕುಶಾಲಪ್ಪ, ಚೆಟ್ಟಂಗಡ ಪುಣ್ಯವತಿ, ಗೌರವ ಸಲಹೆಗರಾರರು ಕೈಬುಲೀರ ಪಾರ್ವತಿ ಬೋಪಯ್ಯ, ಚೆಟ್ಟಂಗಡ ಪುಣ್ಯವತಿ, ಮತ್ತು ಸಂಘದ ಸಧಸ್ಯರುಗಳು ಹಾಜರಿದ್ದರು.