ಹೆಬ್ಬಾಲೆ, ಏ. ೧೪: ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಯರಾ ಎನರ್ಜಿ ಲಿಮಿಟೆಡ್ ಆಶ್ರಯದಲ್ಲಿ ಕೂಡ್ಲೂರು ಕೆ.ಕೆ. ನಿಂಗಪ್ಪ ಅಂಡ್ ಸನ್ಸ್ ನಯರಾ ಪೇಟ್ರೋಲ್ ಬಂಕ್‌ನಲ್ಲಿ ಅಗ್ನಿ ಅವಘಡ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಅಗ್ನಿಶಾಮಕ ಠಾಣಾಧಿಕಾರಿ ಚಿಕ್ಕೇಗೌಡ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಆಕಸ್ಮಿಕವಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಬೆಂಕಿ ಸಂಭವಿಸಿದಾಗ ಯಾವ ರೀತಿ ಬೆಂಕಿಯನ್ನು ನಂದಿಸಬೇಕು ಎಂಬ ಬಗ್ಗೆ ಅಗ್ನಿ ಶಾಮಕ ಸಿಬ್ಬಂದಿಗಳು ಅಣಕು ಪ್ರದರ್ಶನದ ಮೂಲಕ ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಿದರು.

ಅಗ್ನಿ ಶಾಮಕ ಇಲಾಖೆಯ ಲತೇಶ್ ಕುಮಾರ್ ಮಾತನಾಡಿ, ರಾಸಾಯನಿಕ ಪ್ರಕ್ರಿಯೆಗಳಿಂದ ಹುಟ್ಟಿಕೊಳ್ಳುವುದನ್ನು ಬೆಂಕಿ ಎನ್ನಲಾಗುವುದು. ನಾನಾ ವಸ್ತುಗಳಿಗೆ ತಗಲುವ ಬೆಂಕಿಯನ್ನು ಬೇರೆ ಬೇರೆ ವಿಧಗಳಲ್ಲಿ ನಂದಿಸಲಾಗುತ್ತದೆ. ಎಲ್ಲದಕ್ಕೂ ನೀರು ಬಳಕೆ ಮಾಡುವುದು ಯೋಗ್ಯವಲ್ಲ. ಕೆಲ ಬಾರಿ ನೀರಿನಿಂದ ಕೂಡ ಅಗ್ನಿ ಹೆಚ್ಚಾಗುವ ಸಂಭವ ಇರುತ್ತವೆ. ಆದ್ದರಿಂದ ಕಾರ್ಬನ್ ಡೈ ಅಕ್ಸೆಡ್ ಅಗ್ನಿನಂದಕ ಸಿಲಿಂಡರ್‌ಗಳನ್ನು ಬಳಸಬೇಕು ಎಂದರು. ಸಾರ್ವಜನಿಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ೧೦೮ಗೆ ಕರೆ ಮಾಡಬಹುದು. ಅಲ್ಲಿಂದ ಅಗ್ನಿ ಶಾಮಕದಳಕ್ಕೆ ಮಾಹಿತಿ ದೊರೆಯುತ್ತದೆ ಎಂದರು.

ನಯರಾ ಎನರ್ಜಿ ಲಿಮಿಟೆಡ್ ರಾಜ್ಯ ಮುಖ್ಯಸ್ಥ ಗಣೇಶ್ ಗೌಡರ್ ಪೆಟ್ರೋಲ್ ಬಂಕ್‌ಗಳಲ್ಲಿ ಸಿಬ್ಬಂದಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಪ್ರೇಮಾನಂದ, ಸಂದೀಪ್, ಪ್ರವೀಣ್, ಸಂಗಮೇಶ ಹಾಗೂ ಆನಂದ, ಕೆ.ಕೆ. ನಿಂಗಪ್ಪ ಅಂಡ್ ಸನ್ಸ್ ನಯರಾ ಪೆಟ್ರೋಲ್ ಬಂಕ್ ಮಾಲೀಕ ಪವನ್ ಕುಮಾರ್, ನಯರಾ ಎನರ್ಜಿ ಲಿಮಿಟೆಡ್ ವಿಭಾಗೀಯ ವ್ಯವಸ್ಥಾಪಕ ಲೂತಾನ್ ಹೋಪ್, ಮಾರಾಟ ವ್ಯವಸ್ಥಾಪಕ ಸತೀಶ್ ದೂಗಾನಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.ಇದೇ ವೇಳೆ ಅಗ್ನಿಶಾಮಕ ಅಧಿಕಾರಿ ಚಿಕ್ಕೇಗೌಡ ಅವರನ್ನು ಸನ್ಮಾನಿಸಲಾಯಿತು.