ಚೆಟ್ಟಳ್ಳಿ, ಏ. ೧೨ : ಚೆಟ್ಟಳ್ಳಿಯ ಸುಮಾರು ೩೦೦ ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ) ಭಗವತಿ ಉತ್ಸವವು ತಾ. ೧೪ರಿಂದ ತಾ. ೧೬ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ತಾ. ೧೧ರಂದು ರಾತ್ರಿ ತಕ್ಕ ಮುಖ್ಯಸ್ಥರು ಹಾಗೂ ಊರಿನವರೆಲ್ಲ ದೇವಾಲಯದಲ್ಲಿ ಸೇರಿ ದೇವರಿಗೆ ಶುದ್ಧಕಳಶ ಪೂಜೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವರ ದೀಪವನ್ನು ಬೊಳಕ್ ಮರದಲ್ಲಿಡಲಾಯಿತು. ನಂತರ ಹಬ್ಬಕಟ್ಟು ವಿಧಿಸಲಾಯಿತು. ದೇವಾಲಯದ ಹಾಗೂ ದೇವರ ಬೊಳಕ್ಮರದ ಸುತ್ತ ದುಡಿಕೊಟ್ಟ್ ಹಾಡಿಗೆ ಸರಿಯಾಗಿ ಬೊಳಕಾಟ್ ನಡೆಯಿತು.
ತಾ.೧೪ರ ಪಟ್ಟಣಿ ಹಬ್ಬದಂದು ಬೆಳಿಗ್ಗೆ ಪುತ್ತರಿರ ಕುಟುಂಬದ ಜಾಗದಲ್ಲಿರುವ ಭಗವತಿ ದೇವರ ಮೂಲನೆಲೆಗೆ ಪೂಜೆ ಸಲ್ಲಿಸುವರು, ಬೆಳಿಗ್ಗೆ ಹಾಗೂ ಮದ್ಯಾಹ್ನ ಹಿಟ್ಟು ಹಾಗೂ ತರಕಾರಿ ಸಾರನ್ನು ಮಾತ್ರ ಮನೆ ಮನೆಗಳಲ್ಲಿ ಸೇವಿಸಿ ದೇವಾಲಯಕ್ಕೆ ತೆರಳುವರು. ಮಧ್ಯಾಹ್ನ ೨ ಗಂಟೆಗೆ ಮುಳ್ಳಂಡ ಐನ್ಮನೆಯಿಂದ ದೇವತಕ್ಕರಾದ ಮುಳ್ಳಂಡ ಕರಣ್ ಕಾವೇರಪ್ಪ ದೇವ ಭಂಡಾರವನ್ನು, ಎತ್ತು ಪೋರಾಟ ವಾದ್ಯ ಹಾಗೂ ದುಡಿಕೊಟ್ಟ್ ಹಾಡಿನೊಂದಿಗೆ ಊರಿನವರು ದೇವಾಲಯಕ್ಕೆ ಕರೆ ತರುವರು.
ತಾ. ೧೫ರಂದು ದೊಡ್ಡಹಬ್ಬದಂದು ಮದ್ಯಾಹ್ನ ೨ ಗಂಟೆಗೆ ಮುಳ್ಳಂಡ ಐನ್ಮನೆಯಿಂದ ಭಂಡಾರ ತಂದು ಚೌರಿ ಆಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಣ್ಣಮಕ್ಕಳಿಂದ ಹಿಡಿದು ದೊಡ್ಡವರಿಗೆ ತೆಂಗಿನಕಾಯಿ ಕೀಳುವ ಸ್ಪರ್ಧೆ ನಡೆಯಲಿದೆ. ಊರಿನವರು, ಭಕ್ತರು ಹಾಗೂ ಹರಕೆ ಹೊತ್ತವರು ದೇವರಿಗೆ ಭಂಡಾರವನ್ನು ಅರ್ಪಿಸಿದ ನಂತರ ದೇವರ ದೀಪವನ್ನು ಬೊಳಕ್ಮರದಿಂದ ತೆಗೆದು ದೇವಾಲಯದ ೩ ಸುತ್ತು ಬಂದು ದೇವಾಲಯದ ಗರ್ಭಗುಡಿಯೊಳಗೆ ಇಡಲಾಗುವುದು. ಅಂದು ಅನ್ನದಾನವಿರುತ್ತದೆ ಎಂದು ತಿಳಿಸಿದೆ.
ತಾ. ೧೬ರಂದು ಬೆಳಿಗ್ಗೆ ೭ ಗಂಟೆಗೆ ದೇವರಿಗೆ ಶುದ್ಧ ಕಳಶ ಪೂಜೆ ಮಾಡಿ ದುಡಿ ಕೊಟ್ಟ್ ಹಾಡಿನೊಂದಿಗೆ ಭಂಡಾರವನ್ನು ದೇವತಕ್ಕಾಮೆಯನ್ನು ಹೊಂದಿರುವ ಮುಳ್ಳಂಡ ಐನ್ಮನೆಗೆ ತಂದು ತಕ್ಕರ ಮರ್ಯಾದಿಯಂತೆ ಊರಿನವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಪಟ್ಟಣಿ ಹಾಗೂ ಹಬ್ಬದ ಕಟ್ಟನ್ನು ಮುರಿಯಲಾಗುವುದು ಎಂದು ಸಮಿತಿ ತಿಳಿಸಿದೆ.